ಬಾಗಲಕೋಟೆ: ಜಿಲ್ಲೆಗೆ ಭೇಟಿ ನೀಡಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗಡಿಯಲ್ಲಿ ಸ್ವಾಗತಿಸಿಕೊಂಡು ಬರಲು ಮುಧೋಳ ಮಾರ್ಗವಾಗಿ ಹೊರಟಿದ್ದ ಸಂಸದ ಪಿ.ಸಿ. ಗದ್ದಿಗೌಡರ ಅವರನ್ನು ರೈತರು ಹಾಗೂ ನೆರೆ ಸಂತ್ರಸ್ತರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮುಧೋಳ ನಗರ ಹೊರ ವಲಯದ ಸೋರಗಾವಿ ಬಳಿ ನಡೆಯಿತು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಆಗಮಿಸುವ ಮುಧೋಳ ನಗರದ ಪ್ರಮುಖ ರಸ್ತೆಯನ್ನೇ ಬಂದ್ ಮಾಡಿ, ರೈತರು, ನೆರೆ ಸಂತ್ರಸ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವಿಷಯ ತಿಳಿದ ಸಂಸದರು, ಬೇರೊಂದು ಮಾರ್ಗದ ಮೂಲಕ ಮಹಾಲಿಂಗಪುರ ಕಡೆಗೆ ಹೊರಟಿದ್ದರು. ಈ ವಿಷಯ ತಿಳಿದ ಪ್ರತಿಭಟನಾಕಾರರು, ಸೋರಗಾವಿ ಬಳಿಗೆ ಸಂಸದರ ವಾಹನಕ್ಕಿಂತ ಮುಂಚೆಯೇ ತೆರಳಿ, ಅವರ ವಾಹನವನ್ನು ಅಡ್ಡಗಟ್ಟಿ ತಡೆದರು.
ಈ ವೇಳೆ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೇಂದ್ರದಿಂದ ನಯಾಪೈಸೆ ತರಲು ವಿಫಲವಾದ ಗದ್ದಿಗೌಡರಿಗೆ ದಿಕ್ಕಾರ ಎಂದು ಕೂಗಿದರು. ಅಲ್ಲದೇ ಜಿಲ್ಲೆಯಲ್ಲಿ ಪ್ರವಾಹ ಬಂದು 60 ದಿನ ಕಳೆದರೂ ಪರಿಹಾರ ಬಂದಿಲ್ಲ. 10 ಸಾವಿರ ತಾತ್ಕಾಲಿಕ ಪರಿಹಾರ ಅರ್ಹರಿಗೆ ಸಿಗದೇ ಅನರ್ಹರ ಪಾಲಾಗಿದೆ. ಈ ಕುರಿತು ಸಾಕಷ್ಟು ಹೋರಾಟ, ಪ್ರತಿಭಟನೆ ನಡೆಸಿದರೂ ಸಂಸದರು ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು, ನೆರೆ ಸಂತ್ರಸ್ತರ ಮನವಿ ಆಲಿಸಿದ ಸಂಸದ ಗದ್ದಿಗೌಡರ, ಪ್ರವಾಹ ಪರಿಸ್ಥಿತಿ ಕುರಿತು ಕೇಂದ್ರದ ಗಮನಕ್ಕೆ ತಂದಿದ್ದೇನೆ. ಜಿಲ್ಲೆಯ ಸಮಸ್ಯೆ ಬಗ್ಗೆ ನಾನು ಸಂಸತ್ನಲ್ಲಿ ಮಾತನಾಡಿದ್ದಕ್ಕಾಗಿಯೇ ನನ್ನನ್ನು ಕೇಂದ್ರದ ಕೃಷಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನಾನು ಮಾಡಿರುವ ಕೆಲಸಗಳನ್ನೆಲ್ಲಾ ನಾನು ಪತ್ರಿಕೆಗಳಿಗೆ ಹಾಕಿಸಿ, ತೋರಿಸುವುದಿಲ್ಲ. ನೆರೆ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಕೊಡಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಸುಮಾರು ಅರ್ಧ ಗಂಟೆಗಳ ಕಾಲ ಸಂಸದರ ಕಾರನ್ನು ಅಡ್ಡಗಟ್ಟಿ ರೈತರು, ಸಂತ್ರಸ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸಂಸದರ ಬೆಂಬಲಿಗರು ಹಾಗೂ ಹೋರಾಟಗಾರರ ಮಧ್ಯೆ ವಾಗ್ವಾದವೂ ನಡೆಯಿತು.