ಬೆಂಗಳೂರು: ತೈಲ ಬೆಲೆ ನಿಯಂತ್ರಿಸಲಾಗದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಲೋಕ್ ತಾಂತ್ರಿಕ್ ಜನತಾ ದಳದ ಮುಖಂಡರು ಹಾಗೂ ಕಾರ್ಯಕರ್ತರು ವಾಹನಕ್ಕೆ ಹಗ್ಗ ಕಟ್ಟಿ ಎಳೆಯುವ ಮೂಲಕ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಶುಕ್ರವಾರ ಪತ್ರಿಭಟನೆ ನಡೆಸಿದರು.
2014ರಲ್ಲಿ ಪೆಟ್ರೋಲ್ ಬೆಲೆ 71ರೂಪಾಯಿ ಇತ್ತು, ಡೀಸೆಲ್ ಬೆಲೆ 63 ರೂಪಾಯಿ ಇತ್ತು. ಆದರೆ ಇಂದು ಪೆಟ್ರೋಲ್ ಒಂದು ಲೀಟರ್ ಗೆ 83ರೂಗೆ ಏರಿದ್ದು, ಡೀಸೆಲ್ ಬೆಲೆ 73 ರೂ.ಗೆ ಏರಿಕೆಯಾಗಿದೆ. ರೂಪಾಯಿ ಮೌಲ್ಯ ಕೂಡಾ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತೈಲ ಬೆಲೆ ನಿಯಂತ್ರಿಸಲಾಗದೆ ಕೈಕಟ್ಟಿ ಕುಳಿತಿರುವುದು ಸರ್ಕಾರದ ವೈಫಲ್ಯತೆಗೆ ಸಾಕ್ಷಿಯಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ಆರೋಪಿಸಿದೆ.
ರಾಜ್ಯ ಸರ್ಕಾರ ಕೂಡಾ ಪೆಟ್ರೋಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡದೆ ಜನಸಾಮಾನ್ಯರಿಗೆ ಮತ್ತು ವಾಹನ ಸವಾರರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ. ತೈಲ ಬೆಲೆಯನ್ನು ಏರಿಕೆ ನಿಯಂತ್ರಿಸಲಾಗದ ಸರ್ಕಾರದ ಧೋರಣೆಗೆ ಧಿಕ್ಕಾರ ಎಂದು ಲೋಕ್ ತಾಂತ್ರಿಕ್ ಪಕ್ಷದ ಕಾರ್ಯಕರ್ತರು, ಮುಖಂಡರು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಪಕ್ಷದ ಕೆಎಂ ಪಾಲಾಕ್ಷ, ಜಿ.ಸಂತೋಷ್, ಅಶ್ವಥ್ ನಾರಾಯಣ, ದಿನೇಶ್ ಬಾಬು, ರಂಗನಾಥ್, ಗಿರೀಶ್, ಭಾಸ್ಕರ್ ಮುಂತಾದವರು ಭಾಗವಹಿಸಿದ್ದರು.
ವಿಡಿಯೋ: ಫಕ್ರುದ್ದೀನ್