ಹುಬ್ಬಳ್ಳಿ: ತೈಲ ಬೆಲೆ ಹೆಚ್ಚಳ ಖಂಡಿಸಿ ಹುಬ್ಬಳ್ಳಿ ಆಟೋರಿಕ್ಷಾ ಮಾಲಿಕರು ಹಾಗೂ ಚಾಲಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ತೈಲಬೆಲೆ ಗಗನಮುಖೀಯಾಗಿದ್ದು,ಸಾಮಾನ್ಯ ಜನರು, ಬಡವರು ಜೀವನ ನಡೆಸುವುದು ಕಷ್ಟವಾಗಿದೆ. ಪ್ರತಿ ಬಾರಿಯೂ ಮಧ್ಯರಾತ್ರಿಯಲ್ಲಿಯೇ ಇಂಧನ ಬೆಲೆ ಏರಿಸುವುದು ಯಾವ ಪುರುಷಾರ್ಥಕ್ಕೆ, ಕೇವಲ ಪೆಟ್ರೋಲ್-ಡೀಸೆಲ್ ಅಲ್ಲದೆ ಎಲ್‌ಪಿಜಿ ಸಿಲಿಂಡರ್ ಬೆಲೆ ಸಹ ಏರಿಸಲಾಗಿದೆ. ಕೂಡಲೇ ಇಂಧನ ಬೆಲೆ ಇಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಸಬೇಕು, ಆಟೋರಿಕ್ಷಾ ಚಾಲಕರ ಪ್ರಾಧಿಕಾರ ರಚಿಸಬೇಕು, ಆಟೋರಿಕ್ಷಾ ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣ ನೀಡಬೇಕು. ಆಟೋರಿಕ್ಷಾ ಚಾಲಕರ ಕುಟುಂಬಕ್ಕೆ ಹತ್ತು ಲಕ್ಷ ರೂ.ಗಳ ಆರೋಗ್ಯ ವಿಮೆ ಒದಗಿಸಬೇಕು, ಅಪಘಾತದಲ್ಲಿ ಅಂಗಾಗ ಹಾನಿಯಾದರೆ 5ಲಕ್ಷ ರೂ, ಮೃತಪಟ್ಟರೆ 10 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು.
ಇದನ್ನೂ ಓದಿ :ಅಪಘಾತ ಕಡಿಮೆಗೊಳಿಸಲು ಕ್ರಮ ಕೈಗೊಳ್ಳಿ
ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ,ಗುರು ಬೆಟಗೇರಿ, ಮಂಜುನಾಥ ಕೋಳಿಕಾಲ, ದಾವುದಅಲಿ ಶೇಖ್, ರೂಫ್‌ಅಬ್ದುಲ್ ಕರೀ ಬಿಜಾಪುರಿ, ಇಬ್ರಾಹಿಂ ಬಾಫಸಾಬ್ ದೌಡಿ, ಬಾಬರ್ ಜಮಖಾನೆ, ಸುಲೇಮಾನ ಟಪಾಲ್ ಇನ್ನಿತರರಿದ್ದರು.