ರಾಯಚೂರು: ಮ್ಯಾನ್ಮಾರ್ ನಲ್ಲಿ ಬೌದ್ಧ ಧರ್ಮಿಯರಿಂದ ರೊಹಿಂಗಾ ಮುಸ್ಲಿಂ ಮಹಿಳೆಯರ ಹತ್ಯೆಕಾಂಡ ನಡೆಯುತ್ತಿರುವುದನ್ನು ಖಂಡಿಸಿ ಮುಸ್ಲಿಂ ಮತ್ತಹಿದ್ ಮಂಚ್ ಸಂಘಟನೆ ನೇತೃತ್ವದಲ್ಲಿ ನಗರದ ಟಿಪ್ಪು
ಸುಲ್ತಾನ್ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಹೆಚ್ಚಾಗುತ್ತಿವೆ. ಈಚೆಗೆ ಖಾಸಗಿ ಸುದ್ದಿವಾಹಿನಿ ಚರ್ಚಾ ಕಾರ್ಯಕ್ರಮದಲ್ಲಿ
ಆರ್‌ಎಸ್‌ಎನ್.ಸಿಂಗ್ ಇಸ್ಲಾಂ ಧರ್ಮ ಹಾಗೂ ಪ್ರವಾದಿ ಮಹ್ಮದ್‌ರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಮುಸ್ಲಿಂ ಸಮಾಜಕ್ಕೆ ಧಕ್ಕೆಯನ್ನುಂಟು ಮಾಡಿದೆ ಎಂದು ದೂರಿದರು.
ದೇಶದ ವಿವಿಧ ಭಾಗದಲ್ಲಿ ಪ್ರತಿಭಟನೆ ನಡೆದಿವೆ. ಆದರೆ, ಈವರೆಗೆ ಇಂಥ ಕೃತ್ಯವೆಸಗಿರುವ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ಕೋಮು ಸೌಹಾರ್ದತೆ ಕದಡುವವರಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ದೂರಿದರು. ಆರ್‌ಎಸ್‌ಎನ್ ಸಿಂಗ್‌ರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಪ್ರಕರಣ ಎನ್ ಐಎ ಸಂಸ್ಥೆಗೆ ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಮತಾಹಿದ್ ಮಂಚ್ ಸಂಘಟನೆ ಸದಸ್ಯರಾದ ಸಿರಾಜ್ ಜಾಪೀ, ಎಂ.ಡಿ. ಶಾಲಂ (ಮಕೋಲ್) ಜಿಯಾ ಉಲ್ ಹಕ್ ಸೇರಿ ಮುಸ್ಲಿಂ ಸಮಾಜದ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.