ಸುರತ್ಕಲ್: ಕಳೆದ ಆರು ದಿನಗಳಿಂದ ಮುಕ್ಕ ಟೋಲ್ ಗೇಟ್ ತೆರವಿಗಾಗಿ ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ “ಆಪತ್ಬಾಂಧವ” ಆಸೀಫ್ ಅವರು ಶುಕ್ರವಾರ ಪ್ರತಿಭಟನಾ ಸ್ಥಳದಲ್ಲಿ ತಾವೇ ಶವವಾಗಿ ಮಲಗುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಸುಮಾರು ತಾಸಿಗೂ ಅಧಿಕ ಕಾಲ ಶವದ ರೀತಿ ಕೈ, ಕಾಲು ದೇಹವನ್ನು ಕಟ್ಟಿ ಬಿಸಿಲಿನಲ್ಲಿ ಮಲಗಿದ ಆಸೀಫ್ ಮೌನವಾಗಿ ಟೋಲ್ ಗೇಟ್ ಗೂಂಡಾಗಿರಿ ವಿರುದ್ಧ ಆಕ್ರೋಶ ಹೊರಹಾಕಿದರು.
ಮುಕ್ಕ ಮತ್ತು ಹೆಜಮಾಡಿ ಟೋಲ್ ಗೇಟ್ ಮಧ್ಯೆ ಕೆಲವೇ ಕಿ.ಮೀ. ಅಂತರವಿದ್ದು ಜನಪ್ರತಿನಿಧಿಗಳು ಆರಂಭದಿಂದಲೇ ಇದು ತಾತ್ಕಾಲಿಕ ಎಂದು ಹೇಳಿಕೊಂಡು ಬರುತ್ತಿದ್ದು ಇಲ್ಲಿಯವರೆಗೆ ಟೋಲ್ ಗೇಟ್ ತೆರವು ಮಾಡಿಲ್ಲ. ಇದರಿಂದ ಜನಸಾಮಾನ್ಯರಿಗೆ ತೀರಾ ಸಮಸ್ಯೆಯಾಗುತ್ತಿದ್ದು ತಕ್ಷಣವೇ ಈ ಟೋಲ್ ಗೇಟ್ ರದ್ದು ಮಾಡಬೇಕೆಂದು ಅಗ್ರಹಿಸಿ ಸಮಾಜ ಸೇವಕ ಆಸೀಫ್ ಆಪತ್ ಬಾಂಧವ ಕಳೆದ ಸೋಮವಾರದಿಂದ ಧರಣಿ ಕೂತಿದ್ದಾರೆ. ಅವರಿಗೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಕ್ರೈಸ್ತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಮುಸ್ಲಿಂ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಬೆಂಬಲ ಘೋಷಿಸಿವೆ. ಗುರುವಾರ ಮಣ್ಣಿನ ಬಾವಿ ನಿರ್ಮಿಸಿ ಅದರೊಳಗೆ ಕೂತು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದ ಆಸೀಫ್ ಟೋಲ್ ಗೇಟ್ ಮುಚ್ಚಿಸದೆ ವಾಪಸ್ ಹೋಗುವುದಿಲ್ಲ ಎಂದು ಪಣತೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದಂತೆಯೇ ಟೋಲ್ ಗೇಟ್ ತೆರವಿಗೆ ಅಹೋರಾತ್ರಿ ಹೋರಾಟ ಕೈಗೊಂಡಿರುವ ಆಪತ್ಬಾಂಧವ ಆಸೀಫ್ ಹೋರಾಟ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರನ್ನು ಸೆಳೆಯುತ್ತಿದೆ. ಜನರನ್ನು ಲೂಟಿ ಮಾಡುತ್ತಿರುವುದಲ್ಲದೆ ಟೋಲ್ ಸಿಬ್ಬಂದಿ ವಾಹನ ಚಾಲಕರ ಮೇಲೆ ಗೂಂಡಾಗಿರಿ ಪ್ರದರ್ಶಿಸುತ್ತಿದ್ದು ಅದು ನಿಲ್ಲದ ಹೊರತು ಹೋರಾಟ ನಿಲ್ಲಿಸುವುದಿಲ್ಲ ಎಂದು ಆಸೀಫ್ ಈಗಾಗಲೇ ಹೇಳಿಕೊಂಡಿದ್ದಾರೆ.
ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ರಾಜೇಂದ್ರ ಕುಮಾರ್ ಹಾಗೂ ಪಕ್ಷದ ಸದಸ್ಯರಾದ ಬೆನೆಟ್, ದಿಲೀಪ್ ಲೋಬೊ, ಮಹಿಳಾ ಮಂಡಳಿ ಹಳೆಯಂಗಡಿ ಅಧ್ಯಕ್ಷೆ ರೇಷ್ಮಾ ಹಳೆಯಂಗಡಿ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಕುಮಾರ್, ಧನರಾಜ ಕೋಟ್ಯಾನ್, ಮುಹಮ್ಮದ್ ಅಶ್ರಫ್, ಸಮಾಜಸೇವಕರಾದ ಮೋಹನ್ ಬಂಗೇರ ಪಾಲ್ಗೊಂಡಿದ್ದರು.