ಚಿಕ್ಕಬಳ್ಳಾಪುರ: ಜಾಗತಿಕ ಬಂಡವಾಳ ಹೂಡಿಕೆ ದಾರರ ಸಭೆ ವಿರೋಧಿಸಿ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು, ರೈತರ ಭೂಮಿ ಆಹಾರ ಉದ್ಯೋಗದ ಹಕ್ಕುಗಳನ್ನು ರಕ್ಷಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯ ಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ನಾಲ್ಕು ವರ್ಷಗಳಲ್ಲಿ ಅತಿವೃಷ್ಟಿ, ಬರಗಾಲ ಹಾಗೂ ಕೋವಿಡ್ ಲಾಕ್‌ಡೌನ್ ಮುಂತಾದ ಪ್ರಾಕೃತಿಕ ವಿಕೋಪಗಳ ಜತೆಗೆ ಎಂದಿನಂತೆ ಸರ್ಕಾರಗಳ ರೈತ ವಿರೋಧಿ ಧೋರಣೆಗಳಿಂದ ನೊಂದಿದ್ದ ರೈತ ಸಮುದಾಯ ಈ ವರ್ಷವಾದರೂ ತಮ್ಮ ಛಿದ್ರಗೊಂಡ ಬದುಕನ್ನು ಸರಿಪಡಿಸಿಕೊಳ್ಳುವ ನಿರೀಕ್ಷೆಯಲ್ಲಿತ್ತು ಆದರೆ ಈ ವರ್ಷವೂ ರಾಜ್ಯದ ಎಲ್ಲೆಡೆ ಉಂಟಾದ ಆತಿವೃಷ್ಟಿಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ.
ಸಮುದಾಯದ ಬಂಡವಾಳ ನೀರು ಪಾಲಾಗಿ ದ್ದರೂ ರಾಜ್ಯ ಬಿಜೆಪಿ ಸರ್ಕಾರ, ರೈತರ ಭೂಮಿ, ವಿದ್ಯುತ್, ನೀರು ಇತ್ಯಾದಿ ಅಮುಲ್ಯ ಆಸ್ತಿಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯಲು ಜಾಗತಿಕ ಬಂಡವಾಳ ಹೂಡಿಕದಾರರ ಸಮಾವೇಶ ನಡೆಸುತ್ತಿರುವುದು ರೈತ ವಿರೋಧಿ ಹಾಗೂ ಜನ ವಿರೋಧಿ ಕ್ರಮವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಲ್ಯಾಂಡ್ ಬ್ಯಾಂಕ್, ಕೆಐಎಡಿಬಿ ಮೊದಲಾದ ಹಸರಿನಲ್ಲಿ ಭೂ ಸ್ವಾಧೀನದ ಮೂಲಕ ರಾಜ್ಯಾದ್ಯಂತ ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಕಿತ್ತುಕೊಳ್ಳ ಲಾಗಿದೆ ಇತ್ತ ಕೃಷಿಯೂ ಇಲ್ಲದೇ ಅತ್ತ ಕೈಗಾರಿಕೆಯೂ ಇಲ್ಲದೇ ಪಾಳು ಬಿದ್ದಿರುವ ಈ ಭೂಮಿಗಳಲ್ಲಿ ಯಾವುದೇ ಪರಿಣಾಮಕಾರಿ, ಉದ್ಯೋಗ ಸೃಷ್ಟಿಯಾಗಿಲ್ಲ. ಕಾರ್ಪೊರೇಟ್ ಕಂಪನಿಗಳ ಭೂ ದಾಹಕ್ಕೆ ಮತ್ತು ಆಸ್ತಿ ಮೌಲ್ಯದ ಹೆಚ್ಚಳಕ್ಕೆ ಬಳಕೆಯಾಗಿವೆ ಪರಿಸ್ಥಿತಿ ಹೀಗಿರುವಾಗ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಸಂಘಟಿಸುತ್ತಿರುವುದು ನಿರರ್ಥಕ ಕಾರ್ಯ ಎಂದು ದೂರಿದರು.
ಹೀಗಾಗಿ ರೈತ ವಿರೋಧಿ ಬಂಡವಾಳ ಹೂಡಿಕೆ ದಾರರ ಸಭೆಯನ್ನು ರದ್ದುಗೊಳಿಸಿ ಅತಿವೃಷ್ಟಿ ಸಂತ್ರಸ್ತ ರೈತ ಕೂಲಿಕಾರರಿಗೆ ವೈಜ್ಞಾನಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಆಗ್ರಹಿಸಿದರು.
ವಿವಿಧ 9 ಬೇಡಿಕೆಗಳನ್ನು ಈಡೇರಿಸಲು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣ, ಎಂ.ವೆಂಕಟ ಸ್ವಾಮಿ, ಎಚ್.ಶ್ರೀನಿವಾಸ್, ಎಂ.ವಿ.ಶಿವಪ್ಪ, ಹೆಚ್. ಎನ್.ಮುನಿರೆಡ್ಡಿ, ಅಮರನಾಥ್, ಬಿ.ಚನ್ನಕೃಷ್ಣಪ್ಪ, ವೆಂಕಟೇಶಪ್ಪ, ಬೈರಪ್ಪ ಇತರರಿದ್ದರು.