ಮೈಸೂರು: ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಜನೆಗಾಗಿ ಬೆಂಗಳೂರಿಗೆ ಬರುವ ಬಲಿಜ ಜನಾಂಗದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಊಟ ಮತ್ತು ವಸತಿಯನ್ನು ಉಚಿತವಾಗಿ ಒದಗಿಸುತ್ತಿರುವ ಚಾಮರಾಜಪೇಟೆಯಲ್ಲಿರುವ ಆನೇಕಲ್ ತಿಮ್ಮಯ್ಯ ಚಾರಿಟಬಲ್ ಟ್ರಸ್ಟ್‌ನ ಕಟ್ಟಡವನ್ನು ಅಕ್ರಮವಾಗಿ ಬಾಡಿಗೆ ಪಡೆದು ಅತಿಕ್ರಮಿಸಿಕೊಂಡು ರಾಯಲ್ ಕಾಂಕರ್ಡ್ ಎಂಬ ತಮ್ಮ ವಿದ್ಯಾಸಂಸ್ಥೆ ನಡೆಸುತ್ತಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮೈಸೂರಿನ ಬಲಿಜ (ಬಣಜಿಗ) ಸಂಘ ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ಬಲಿಜ(ಬಣಜಿಗ) ಸಮುದಾಯದ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
2017ರ ಮೇ 26ರಂದು ಟ್ರಸ್ಟ್‌ನ ಕಟ್ಟಡವನ್ನು ಅಕ್ರಮವಾಗಿ ಬಾಡಿಗೆಗೆ ಪಡೆದು ನೋಂದಾಯಿಸಿಕೊಂಡಿದ್ದಾರೆ. ಅಂದಿನಿಂದ ಈವರೆಗೂ ಒಂದು ರೂಪಾಯಿಯನ್ನೂ ಕಟ್ಟಡ ಬಾಡಿಗೆ ನೀಡಿದೆ ಸುಮಾರು 7.5 ಕೋಟಿ ರೂಪಾಯಿಯಷ್ಟು ಬಾಡಿಗೆ ಬಾಕಿ ಉಳಿಸಿಕೊಂಡು ಕಾನೂನು ಬಾಹಿರವಾಗಿ ಮುಂದುವರಿಯುತ್ತಿದ್ದಾರೆ. 2018ರಲ್ಲಿ ಹೊಸದಾಗಿ ಚುನಾಯಿಸಲ್ಪಟ್ಟ ಟ್ರಸ್ಟಿಗಳು ಬಾಡಿಗೆ ಬಾಕಿ ಉಳಿಸಿಕೊಂಡಿರುವ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಿ ವಕೀಲರ ಮೂಲಕ ನೋಟಿಸ್ ಜಾರಿಗೊಳಿಸಿದ್ದಾರೆ.
ಆದರೆ, ಶಿವರಾಮೇಗೌಡ ಟ್ರಸ್ಟ್‌ನ ಪದಾಧಿಕಾರಿಯೊಬ್ಬರ ವಿರುದ್ಧ ಪೊಲೀಸರಿಗೆ ಸುಳ್ಳು ದೂರು ನೀಡಿ, ಬಲಿಜ ಸಮುದಾಯದವರ ಸ್ವಾಭಿಮಾನಕ್ಕೆ ಧಕ್ಕೆ ತಂದು, ಟ್ರಸ್ಟ್‌ನ ಕಟ್ಟಡಕ್ಕೆ ಯಾವುದೇ ಬಾಡಿಗೆ ನೀಡದೆ ಅಕ್ರಮವಾಗಿ ಮುಂದುವರಿದಿದ್ದಾರೆ. ಜತೆಗೆ ಟ್ರಸ್ಟ್‌ನ ಉಳಿದ ಜಾಗವನ್ನೂ ಅತಿಕ್ರಮಿಸಿಕೊಂಡು ಅನಧಿಕೃತವಾಗಿ ವಿಸ್ತರಿಸಿರುವ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಎಚ್.ಎ.ವೆಂಕಟೇಶ್, ಕಾರ್ಯದರ್ಶಿ ಎಚ್.ಆರ್.ಗೋಪಾಲಕೃಷ್ಣ, ಖಜಾಂಚಿ ಡಿ.ನಾಗರಾಜು, ನಿರ್ದೇಶಕರಾದ ಡಿ.ಕೆ.ಸುರೇಶ್, ಡಿ.ಬಿ.ಚಂದ್ರಶೇಖರಯ್ಯ, ಕೆ.ಚಂದ್ರಶೇಖರ್, ಗುರುಮೂರ್ತಿ, ಮಹದೇವಪ್ಪ, ನಾಗರಾಜಯ್ಯ, ಎಚ್.ಪಿ.ಮೋಹನ್, ನರಸಿಂಹರಾಜು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.