ರಾಮನಗರ: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ-1961ಕ್ಕೆ ತಿದ್ದುಪಡಿ ತಂದು ಕಲಂ 79 ಎಬಿಸಿ ಮತ್ತು ಕಲಂ 80ನ್ನು ತೆಗೆದು ಹಾಕಲು ಸರ್ಕಾರ ಉದ್ದೇಶಿಸಿ ದ್ದು, ತಿದ್ದುಪಡಿ ವಿರೋಧಿಸುತ್ತಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಜಮಾಯಿಸಿ, ರೈತ ಪ್ರಮುಖರು ಸರ್ಕಾರದ ವಿರುದ್ದ ಕೆಲ ಕಾಲ ಧರಣಿ ಪ್ರತಿಭಟನೆ ನಡೆಸಿದರು. ಕರಡು ಮಸೂ ದೆಯ ಪ್ರತಿಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳಿಗೆ ಮಾಡಿಕೊಂಡ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿರುವ ತಿದ್ದುಪಡಿಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿ ಮಾಡುವುದಾಗಿ ಕಂದಾಯ ಸಚಿವರು ತಿಳಿಸಿದ್ದಾರೆ. ತಿದ್ದುಪಡಿ ಜಾರಿಗೊಳಿಸುವ ಮುನ್ನ ಸರ್ಕಾರ ಸಾರ್ವಜನಿಕರ ಮುಂದಿಟ್ಟು, ಅಭಿ ಪ್ರಾಯ ಸಂಗ್ರಹಿಸಬೇಕು. ಆದರೆ ಸರ್ಕಾರ ಅದನ್ನು ಮಾಡಿಲ್ಲ ಎಂದು ದೂರಿದರು.
ಸಣ್ಣ ಹಿಡುವಳಿ ರೈತರ ಸಂಪೂರ್ಣ ಬದುಕು ಬೀದಿಗೆ ಬೀಳಲಿದೆ. ರೈತಾಪಿ ಸಂಸ್ಕೃತಿ ಸಂಪೂರ್ಣ ಮಾಯವಾಗಿ ಬಂಡವಾಳಿಗರ ಕೃಷಿ ಸಂಸ್ಕೃತಿ ಬೆಳೆಯಲಿದೆ. ಆಹಾರ ಸಾರ್ವಭೌಮತ್ವ ಹಾಗೂ ಭದ್ರತೆಗೆ ಪೆಟ್ಟುಬೀಳಲಿದೆ. ಭೀಕ್ಷೆ ಬೇಡುವ ಸ್ಥಿತಿ ನಿಮಾಣವಾಗುತ್ತದೆ. ಗ್ರಾಹಕರಿಗೂ ಹೊಡೆತ ಬೀಳುತ್ತದೆ.
ಬಂಡವಾಳ ಶಾಹಿಗಳು ಕುಲಾಂತರಿ ಬೀಜಗಳ ಬಳಕೆ, ರಾಸಾಯನಿಕ ಕೃಷಿ, ಮಾನೋಕಲ್ಚರ್‌ಗೆ ಒತ್ತು ನೀಡಿ, ಇಡೀ ಪರಿಸರವೇ ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸಿಎಂ ಯಡಿಯೂರಪ್ಪ, ರೈತ ಹೋರಾಟದಿಂದ ಬಂದವರಾಗಿದ್ದಾರೆ. ಈ ತಿದ್ದುಪಡಿ ಮಸೂದೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಅವಕಾಶ ನೀಡದೆ, ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ.
ತಿದ್ದುಪಡಿ ಮಾಡಿದರೆ ಉಗ್ರ ಹೋರಾಟ ಅನಿವಾರ್ಯ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿ ರಾಜು, ಜಿಲ್ಲಾ ಕಾರ್ಯದರ್ಸಿ ಎಂ.ಪುಟ್ಟಣ್ಣ. ಪ್ರಮುಖರಾದ ನಾಗರಾಜು, ಮುನಿ ಸಿದ್ದೇಗೌಡ, ಕೃಷ್ಣಯ್ಯ, ರಾಮೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜು ಮುಂತಾದವರು ಭಾಗವಹಿಸಿದ್ದರು.