ಬೆಳಗಾವಿ: ಫಲವತ್ತಾದ ಜಮೀನು ಕಬಳಿಸಿಕೊಂಡು ರೈತರನ್ನು ಸರ್ಕಾರ ಬೀದಿ ಪಾಲು ಮಾಡುತ್ತಿದೆ ಎಂದು ಆರೋಪಿಸಿ ನಗರ ಸೇರಿದಂತೆ ಸುತ್ತಲಿನ ಹಳ್ಳಿಗಳ ರೈತರು ಸೋಮವಾರ ಇಲ್ಲಿಯ ಸುವರ್ಣ ವಿಧಾನಸೌಧ ಎದುರು ಪ್ರತಿಭಟನೆ ನಡೆಸುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಸುವರ್ಣ ವಿಧಾನಸೌಧ ಎದುರು ಜಮಾಯಿಸಿದ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಫಲವತ್ತಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರಿಂದ ರೈತರು ಜಮೀನು ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಹೀಗಾಗಿ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಹಾಗೂ ಹಲಗಾದಲ್ಲಿ ಜಲ ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಈಗಾಗಲೇ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ರೈತರು ಜಮೀನು ನೀಡಿದ್ದಾರೆ. ಈಗ ಮತ್ತೆ ಬೈಪಾಸ್ ರಸ್ತೆ, ಜಲ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಭೂಮಿ ಕಬಳಿಸಲಾಗುತ್ತಿದೆ. ಫಲವತ್ತಾದ ಜಮೀನು ಹೊಂದಿರುವ ಇಲ್ಲಿ ವರ್ಷಕ್ಕೆ 3-4 ಬೆಳೆ ತೆಗೆಯಲಾಗುತ್ತಿದೆ. ಇಂಥ ಜಮೀನು ಹೋದರೆ ಮುಂದೆ ರೈತರು ಏನು ಮಾಡುವುದು ಎಂದು ಪ್ರಶ್ನಿಸಿದರು.
ಹಲಗಾ, ಬೆಳಗಾವಿ ನಗರದ ವಡಗಾಂವಿ, ರೈತ ಗಲ್ಲಿ, ಶಹಾಪುರ, ಖಾಸಬಾಗ ಸೇರಿದಂತೆ ಸುತ್ತಲಿನ ಪ್ರದೇಶಗಳ ರೈತರ ಜಮೀನು ಅಭಿವೃದ್ಧಿ ಕಾರ್ಯಕ್ಕಾಗಿ ಹೋಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಕೃಷಿ ಜಮೀನು ಸಂಪೂರ್ಣ ನಾಶವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಕೂಡಲೇ ಸರ್ಕಾರ ಫಲವತ್ತಾದ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ರದ್ದು ಪಡಿಸಬೇಕು. ರೈತರಿಗೆ ಕೃಷಿ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಜಿಪಂ ಸದಸ್ಯೆ ಮಾಧುರಿ ಹೆಗಡೆ, ರೈತ ಗಲ್ಲಿಯ ರೈತ ಸಂಘದ ಅಧ್ಯಕ್ಷ ರಾಜು ಮರವೆ, ಉಪಾಧ್ಯಕ್ಷ ಗಂಗಾಧರ ಬಿರ್ಜೆ, ವಡಗಾಂವಿಯ ರೈತ ಸಂಘದ ಪದಾಧಿಕಾರಿ ರಮಾಕಾಂತ ಬಾಳೇಕುಂದ್ರಿ, ಹಣಮಂತ ಬಾಳೇಕುಂದ್ರಿ, ಮುಖಂಡರಾದ ಸುಜೀತ ಮುಳಗುಂದ ಸೇರಿದಂತೆ ಇತರರು ಇದ್ದರು.