ಬೆಳಗಾವಿ: ನಗರದ ಕೋಟೆ ಕೆರೆ ಪ್ರವೇಶಕ್ಕಾಗಿ ಸಾರ್ವಜನಿಕರಿಗೆ ಶುಲ್ಕ ನಿಗದಿಪಡಿಸಿರುವುದನ್ನು ಖಂಡಿಸಿ ಜಿಲ್ಲಾಡಳಿತ ವಿರುದ್ಧ ವಿವಿಧ ಸಾಮಾಜಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರವಿವಾರ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೆರೆ ದ್ವಾರದ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ಶುಲ್ಕ ವಿಧಿಸಿರುವುದನ್ನು ಹಿಂಪಡೆಯಬೇಕು. ವಾಯು ವಿಹಾರಕ್ಕೆ ಹೋಗುವವರಿಗೆ ಹಾಗೂ ಕೆರೆಯ ಸುತ್ತಲೂ ಓಡಾಡಲು ಅನುಕೂಲಕರವಾಗಲಿ ಎಂಬ ಉದ್ದೇಶದಿಂದ ಈ ಕ್ರಮವನ್ನು ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕರ್ತರಾದ ಶಿವಾನಂದ ತಂಬಾಕಿ, ವಿನಾಯಕ ಬೋವಿ, ಸುಮಿತ ಅಗಸಗಿ, ಸತೀಶ ಗಾಡಿವಡ್ಡರ, ಸಂಪತ ಸಕ್ರೆಣ್ಣವರ, ವಿನಾಯಕ ಹಟ್ಟಿಹೊಳಿ, ಗಿರೀಶ ಪಾಟೀಲ, ಮಹೇಶ ಶೀಗಿಹಳ್ಳಿ, ಸಂಪತಕುಮಾರ ದೇಸಾಯಿ, ರಮೇಶ ಯರಗಣ್ಣವರ ಇತರರು ಇದ್ದರು.
Advertisement
ಸ್ಮಾರ್ಟ್ ಸಿಟಿ ಯೋಜನೆಯಡಿ 7 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಸೌಂದರ್ಯಿಕರಣಗೊಳಿಸಿದ ಬಳಿಕ ಪ್ರವೇಶ ಶುಲ್ಕ ವಿಧಿಸಲಾಗುವುದೆಂದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರು ಹೇಳಿಕೆ ನೀಡಿದ ನಂತರ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರವೇಶ ಶುಲ್ಕ ನಿಗದಿಪಡಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಲಿದ್ದು, ಯಾವುದೇ ಕಾರಣಕ್ಕೂ ಶುಲ್ಕ ವಿಧಿಸಬಾರದು ಎಂದು ಆಗ್ರಹಿಸಿದರು.
ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ: ಸಾರ್ವಜನಿಕರ ವಿರೋಧ
ಬೆಳಗಾವಿ: ನಗರ ಪ್ರವೇಶಿಸುವಾಗ ಎಲ್ಲರನ್ನೂ ಕೈ ಬೀಸಿ ಕರೆಯುವ ಕೋಟೆ ಕೆರೆ ಪ್ರವೇಶಕ್ಕಾಗಿ ಶುಲ್ಕ ನಿಗದಿ ಮಾಡಿರುವುದು ಈಗ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗಿದೆ. ಉಚಿತ ಪ್ರವೇಶ ಇಡುವಂತೆ ಜನರು ಆಗ್ರಹಿಸಿದ್ದಾರೆ. ಎತ್ತರದ ತ್ರಿವರ್ಣ ಧ್ವಜ ಹಾಕಿಸಿದ ಬಳಿಕವಂತೂ ಕೆರೆಯ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ಕೆರೆಯ ಸುತ್ತಲೂ ವಾಯು ವಿಹಾರಕ್ಕೆ ಬರುವವರ ಸಂಖ್ಯೆ ದುಪ್ಪಟ್ಟಾಗಿದೆ. ಸಾವಿರಾರು ಜನರು ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಇಲ್ಲಿಗೆ ಬರುತ್ತಾರೆ. ಇಂಥ ಕೆರೆಯ ಆವರಣ ಪ್ರವೇಶಕ್ಕೂ ಜಿಲ್ಲಾಡಳಿತ ಶುಲ್ಕ ನಿಗದಿ ಮಾಡುವ ಮೂಲಕ ಸಾರ್ವಜನಿಕರಿಗೆ ಬರೆ ಎಳೆದಿದೆ. ದೊಡ್ಡವರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ. ಎಂಬ ಶುಲ್ಕ ನಿಗದಿಯಾಗಿದೆ. ಸಮೀಪದ ಆಸ್ಪತ್ರೆಗಳಿಗೆ ಬರುವ ರೋಗಿಗಳು, ಸುತ್ತಲಿನ ಪ್ರದೇಶಗಳ ಜನರು ಇನ್ನು ಮುಂದೆ ಬರಬೇಕಾದರೆ ಶುಲ್ಕ ಕಟ್ಟಿ ಒಳಗೆ ಬರಬೇಕಾಗಿದೆ. ಬೆಳಗಾವಿ ಹಾಗೂ ಹೊರಗಿನಿಂದ ಬರುವ ಸಾವಿರಾರು ಜನರಿಗೆ ಇದೊಂದು ಸುಂದರ ತಾಣ. ಕೆರೆ ಒಳಗಿರುವ ಬೋಟಿಂಗ್ ಮತ್ತಿತರ ಸೌಲಭ್ಯಗಳಿಗೆ ಶುಲ್ಕ ಇದೆ. ಆದರೆ ಕೆರೆ ಪ್ರವೇಶಕ್ಕೆ ಶುಲ್ಕ ನಿಗದಿ ಮಾಡಿರುವದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.