ದಾಂಡೇಲಿ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿ ಸದಸ್ಯರು ಕಾರ್ಮಿಕ ಮಂಡಳಿಯಿಂದ ಸಿಗುವ ಸೌಲಭ್ಯಗಳಿಗಾಗಿ ಕ್ರಮ ಬದ್ಧವಾಗಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಈವರೆಗೆ ಯಾವೊಂದು ಸೌಲಭ್ಯ ನೀಡದೇ ಸತಾಯಿಸುತ್ತಿರುವ ಕಾರ್ಮಿಕ ಮಂಡಳಿ ಕಾರ್ಮಿಕ ವಿರೋಧಿ ಕ್ರಮವನ್ನು ಖಂಡಿಸಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಹಾಗೂ ದಾಂಡೇಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮತ್ತು ಗುತ್ತಿಗೆದಾರರ ಒಕ್ಕೂಟದಿಂದ ಮಂಗಳವಾರ ಹಳೆ ನಗರಸಭಾ ಕಟ್ಟಡದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಸಾಬ ಕೆಸನೂರ ಅವರು ಫಲಾನುಭವಿ ಕಾರ್ಮಿಕರಿಗೆ ಮಂಡಳಿ ಸೌಲಭ್ಯ ತಡವಾಗಲು ಮಂಡಳಿ ಇತ್ತೀಚಿನ ಕೆಲವು ನಿರ್ಣಯಗಳು ಕಾರಣವಾಗಿದೆ. ಸಿಬ್ಬಂದಿ ಕೊರತೆಯೂ ಕಾರಣವಾಗಿದೆ. ಕಾರ್ಮಿಕರಿಗೆ ಅರ್ಹವಾಗಿ ಸಿಗಬೇಕಾದ ಸವಲತ್ತುಗಳು ಸಿಗದಿರುವುದರಿಂದ ಅನ್ಯಾಯವಾಗುತ್ತಿದೆ. ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ಸುಮಾರು ಎರಡು ವರ್ಷದ ನಂತರ ಪರಿಶೀಲನೆಯ ಹೆಸರಿನಲ್ಲಿ ಕಲ್ಯಾಣ ಮಂಡಳಿ ಸಿಬ್ಬಂದಿ ಪುರುಷ ಕಾರ್ಮಿಕರನ್ನು ಗೃಹಿಣಿ ಎಂದು ಪರಿಶೀಲನಾ ವರದಿಯಲ್ಲಿ ಬರೆದು ಹೋಗಿರುವ ಅವಾಂತರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವಂತೆ ಕಳೆದ ಒಂದೂವರೆ ವರ್ಷದಿಂದ ಮೌಖೀಕವಾಗಿ, ಪತ್ರ ಮುಖೇನ ಮನವಿ ಮಾಡಿದರೂ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿರುವುದಿಲ್ಲ. ಇದು ಅನ್ಯಾಯಕ್ಕೊಳಗಾದ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ಒಂದು ತಿಂಗಳೊಳಗೆ ಈ ಸಮಸ್ಯೆ ಬಗೆಹರಿಸಿ, ಕಾರ್ಮಿಕರಿಗೆ ಅರ್ಹವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡದಿದ್ದಲ್ಲಿ ಸಾವಿರಾರು ಅಸಂಘಟಿತ ಕಾರ್ಮಿಕರು ಸೇರಿ ದಾಂಡೇಲಿಯಿಂದ ಕಾರವಾರಕ್ಕೆ ಬೃಹತ್ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ಮೂಲಕ ಉಗ್ರ ಹೋರಾಟ ಮಾಡಬೇಕಾದಿತು ಎಂದು ರಾಜೇಸಾಬ ಕೆಸನೂರು ಎಚ್ಚರಿಸಿದ್ದಾರೆ.
ಕಟ್ಟಡ ಕಾರ್ಮಿಕರ ಫೆಡರೇಶನ್‌ನ ಮುಖಂಡ ಕೃಷ್ಣಾ ಭಟ್ಟ ಅವರು ಮಾತನಾಡಿ ಕಾರ್ಮಿಕ ಇಲಾಖೆ ದಬ್ಟಾಳಿಕೆ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಬಲವಾಗಿ ಖಂಡಿಸಿ, ಕಾರ್ಮಿಕರಿಗೆ ಅನ್ಯಾಯವಾಗುವುದಕ್ಕೆ ಉಗ್ರ ಹೋರಾಟವೊಂದೆ ದಾರಿ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ನಿರೀಕ್ಷಕ ಸುರೇಂದ್ರ ಕಾಂಬಳೆಯವರು ಪ್ರತಿಭಟನಾಕಾರರಿಂದ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸ್ವೀಕರಿಸಿ, ಕಾರ್ಮಿಕರ ಬೇಡಿಕೆ ನ್ಯಾಯಯುತವಾಗಿದ್ದು, ಇದನ್ನು ಬಗೆಹರಿಸಲು ಹಿರಿಯ ಅಧಿಕಾರಿಗಳಿಗೆ ವಿನಂತಿಸಲಾಗುವುದು ಎಂದರು.
ಕಟ್ಟಡ ಕಾಮಗಾರಿ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಚಿಂತಾಮಣಿ ಕೋಡಳ್ಳಿ, ಸಂಘದ ಪದಾಧಿಕಾರಿಗಳಾದ ಅಬ್ದುಲ್ ಮಜೀದ್ ಕಿತ್ತೂರ, ಮಂಜುನಾಥ ಭೋವಿ, ಭೀಮಶಿ ಭೋವಿವಡ್ಡರ, ಮಹೇಶ ಸಾವಂತ, ಬಾಬುಲಾಲ್ ಪಿರ್ಜಾದೆ, ಅಬ್ದುಲ್ ಸತ್ತಾರ, ರವಿಚಂದ್ರ ಮಣ್ಣವಡ್ಡರ, ಮಾರುತಿ ಚವ್ಹಾಣ್ ಮೊದಲಾದವರು ಉಪಸ್ಥಿತರಿದ್ದರು.