ಕಲಬುರಗಿ: ತ್ರಿಭಾಷಾ ಸೂತ್ರದ ನೆಪದಲ್ಲಿ ಹಿಂದಿ ಕಡ್ಡಾಯಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಹಿಂದಿ ಪುಸ್ತಕವನ್ನು ಸುಟ್ಟು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ನೀಡಿರುವ ವರದಿಯಂತೆ ತ್ರಿಭಾಷಾ ಸೂತ್ರ ಜಾರಿ ಮಾಡುವ ಮೂಲಕ ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳಲ್ಲಿ ಹೇರುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಭಾರತ ವಿವಿಧ ಭಾಷೆಗಳಿರುವ ರಾಜ್ಯಗಳನ್ನು ಹೊಂದಿದೆ. ಇಲ್ಲಿ ಪ್ರತಿಯೊಂದು ಭಾಷೆ, ಸಂಸ್ಕೃತಿಯಿದೆ. ಆಯಾ ರಾಜ್ಯಗಳ ಭಾಷೆಗಳನ್ನು ಉಳಿಸಿ, ಬೆಳೆಸುವ ಅಧಿಕಾರ ಎಲ್ಲಾ ರಾಜ್ಯಗಳಿಗಿದೆ. ಈಗ ಕೇಂದ್ರ ಸರ್ಕಾರ ರಾಷ್ಟ್ರೀಯ ಭಾಷೆ ಎಂದು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸದೇ ಹೋದರೆ ಮುಂದೊಂದು ದಿನ ಗಂಭೀರ ಪರಿಣಾಮ ಎದುರಿಸಬೇಕಾಗುವುದು. ಬಲವಂತದ ಹೇರಿಕೆ ದೇಶ ವಿಭಜನೆಗೆ ಕಾರಣವಾಗಬಹುದು. ಕೂಡಲೇ ತೃತೀಯ ಭಾಷೆಯಾಗಿ ಹಿಂದಿಯನ್ನು ಹಿಂದಿಯೇತರ ರಾಜ್ಯಗಳಲ್ಲಿ ಹೇರುವುದನ್ನು ಕೈಬೀಡಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಬೇಕಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ರವಿ ದೇವಣಗಾಂವ, ಪ್ರಶಾಂತ ಮಹತಿ, ಮಲ್ಲಿಕಾರ್ಜುನ ಬುಳ್ಳಾ, ಆನಂದ ಪಾಲ್ಕೆ, ಅಶೋಕ ಪಾಟೀಲ, ನವೀನ ಬಿರಾದಾರ, ವಿಲಾಸ ಬಿರಾದಾರ, ದಿಲೀಪ ಕಿರಸಾವಳಗಿ ಹಾಗೂ ಇತರರು ಭಾಗವಹಿಸಿದ್ದರು.