Advertisement

ಹಾಲು ಆಮದು ವಿರೋಧಿಸಿ ಪ್ರತಿಭಟನೆ

12:06 PM Oct 15, 2019 | Suhan S |

ಬೆಳಗಾವಿ: ತೆರಿಗೆ ರಹಿತ ಕ್ಷೀರ ಉತ್ಪನ್ನ ಆಮದು ಪ್ರಸ್ತಾವನೆ ನಿಷೇಧಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ಹಾಲು ಒಕ್ಕೂಟದ ಆಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ವಿವೇಕರಾವ್‌ ಪಾಟೀಲ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಎಮ್ಮೆಗಳನ್ನು ಕರೆತಂದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ರೈತರು ಎಲ್ಲರ ಗಮನಸೆಳೆದರು. ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಮ್ಮ ದೇಶದಲ್ಲೇ ಸಾಕಷ್ಟು ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಹೀಗಿರುವಾಗ ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಒಪ್ಪಂದ ಜಾರಿ ಮಾಡಿದರೆ ಹಾಲು ಉತ್ಪಾದಕರು ಹಾಗೂ ಸಹಕಾರಿ ಹೈನು ಉದ್ಯಮಕ್ಕೆ ಪ್ರಬಲ ಹಿಂಜರಿತ ಉಂಟಾಗಲಿದೆ. ಕಾರಣ ಸರಕಾರ ತಕ್ಷಣವೇ ಈ ಆಮದು ವಿಚಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ್‌ ಪಾಟೀಲ, ಯಾವುದೇ ರೀತಿಯಲ್ಲಿ ತೆರಿಗೆ ಇಲ್ಲದೇ ವಿದೇಶದಿಂದ ಹಾಲನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ನಮ್ಮ ಹಾಲು ಉತ್ಪಾದಕರಿಗೆ ತೊಂದರೆ ಆಗುವ ಸಾಧ್ಯತೆ ಖಚಿತವಾಗಿದೆ. ಹೊರ ದೇಶದ ಹಾಲು ನಮ್ಮಲ್ಲಿಗೆ ಬಂದರೆ ನಮ್ಮ ರೈತರು ತಮ್ಮ ಜಾನುವಾರುಗಳನ್ನು ಮಾರಲೇಬೇಕಾದ ಸ್ಥಿತಿ ಎದುರಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. ಕೇಂದ್ರ ಅನುಷ್ಠಾನಗೊಳಿಸಲು

ಹೊರಟಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಒಪ್ಪಂದದಲ್ಲಿ ಹೈನುಗಾರಿಕೆಯ ಉತ್ಪನ್ನಗಳು ಆಮದು ಮಾಡಿಕೊಳ್ಳುವ ವಿಷಯಸೇರ್ಪಡೆಯಾದಲ್ಲಿ ವಿದೇಶದ ಹಾಲು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು ಹಾಲು ಉತ್ಪಾದಕರ ಬಾಳು ಮತ್ತು ಸಹಕಾರ ಹೈನೋದ್ಯಮದ ಮೇಲೆ ಪ್ರಬಲ ಪ್ರಹಾರ ನೀಡುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಹಾಲು ಒಕ್ಕೂಟದ ಆಡಳಿತ ಮಂಡಳಿ ಸದಸ್ಯರಾದ ಕಟ್ಟಿ, ಮುಗಳಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ರಾಯಪ್ಪ ಡೂಗ ಮೊದಲಾದವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next