ರೋಣ: ಪಟ್ಟಣದ ಬಸನಗೌಡ ಗಿರಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಗುಳೇದಗುಡ್ಡಕ್ಕೆ ಸ್ಥಳಾಂತರಗೊಂಡಿರುವುದನ್ನು ಖಂಡಿಸಿ ಹಳೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪಟ್ಟಣದ ಮುಖಂಡರು ಹಾಗೂ ಅತಿಥಿ ಉಪನ್ಯಾಸಕರು ಪಟ್ಟಣದ ಸಿದ್ಧಾರೂಢ ಮಠದಿಂದ ತಹಶೀಲ್ದಾರ್ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಿದರು. ಸ್ಥಳಾಂತರ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸನಗೌಡ ಗಿರಡ್ಡಿ ಕಾಲೇಜಿನ ಹಳೆಯ ವಿದ್ಯಾರ್ಥಿ ಅನಿಲಕುಮಾರ ನವಲಗುಂದ ಮಾತನಾಡಿ, ಪಟ್ಟಣದಲ್ಲಿದ್ದಂತಹ ಬಸನಗೌಡ ಗಿರಡ್ಡಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಬೇರೆ ಕಡೆಗೆ ಸ್ಥಳಾಂತರಗೊಂಡಿರುವುದು ಬಡ ವಿದ್ಯಾರ್ಥಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ. ರೋಣ ಪಟ್ಟಣವು ತಾಲೂಕು ಕೇಂದ್ರ ಸ್ಥಾನವಾಗಿದ್ದು, ಕೇವಲ ಇಲ್ಲಿ ಒಂದೇ ಒಂದು ಸರ್ಕಾರಿ ಪದವಿ ಕಾಲೇಜು ಇತ್ತು. ಸರ್ಕಾರಿ ಕಾಲೇಜು ಇದ್ದುದ್ದರಿಂದ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಇಂದು ಸರ್ಕಾರಿ ಕಾಲೇಜು ಸ್ಥಾಳಾಂತರಗೊಂಡಿದ್ದು, ಇಲ್ಲಿನ ಬಡವಿದ್ಯಾರ್ಥಿಗಳಿಗೆ ತೀವ್ರ ನೋವುಂಟು ಮಾಡಿದೆ ಎಂದರು.
ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಇದ್ದರೂ ವಿಶ್ವವಿದ್ಯಾಲಯವು ಕೂಗಳತೆಯ ದೂರದಲ್ಲಿ ಮತ್ತೂಂದು ಖಾಸಗಿ ಪದವಿ ಕಾಲೇಜಿಗೆ ಅನುಮತಿ ನೀಡಿದ ಪರಿಣಾಮದಿಂದಾಗಿ ಸರ್ಕಾರಿ ಪದವಿ ಕಾಲೇಜಿನ ಸಂಖ್ಯಾ ಬಲವು ಕುಸಿಯುತ್ತ ಹೋಯಿತು. ವಿಶ್ವವಿದ್ಯಾಲಯ ತೆಗೆದುಕೊಂಡ ಈ ದ್ವಂದ ನಿಲುವೇ ಇಂದು ಕಾಲೇಜು ಸ್ಥಳಾಂತರಗೊಳ್ಳಲು ಮುಖ್ಯ ಕಾರಣವಾಗಿದೆ ಎಂದು ಆರೋಪಿಸಿದರು.
ಕೂಡಲೇ ಸರ್ಕಾರಿ ಪದವಿ ಕಾಲೇಜು ಸ್ಥಳಾಂತರ ಆದೇಶವನ್ನು ಹಿಂಪಡೆದುಕೊಂಡು, ರೋಣ ಪಟ್ಟಣದಲ್ಲಿಯೇ ಈ ಕಾಲೇಜು ಮುಂದುವರೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನದಲ್ಲಿ ಹಳೆಯ ವಿದ್ಯಾರ್ಥಿಗಳು, ರೋಣ ಪಟ್ಟಣದ ನಾಗರಿಕರು, ಶಿಕ್ಷಣ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅರ್ಜುನ ಕೊಪ್ಪಳ, ಎಸ್.ಬಿ. ಜಗಾಪುರ, ಆರ್.ಎನ್. ಉಮಚಗಿ, ಎಸ್.ಕೆ.ವಿರಕ್ತಮಠ, ಸಂಗನಗೌಡ ಕಲ್ಲನಗೌಡ್ರ, ಯಲ್ಲಪ್ಪ ಕಿರೇಸೂರ, ಗಂಗಾಧರ ಗಡಗಿ, ಹನುಮಂತ ಚಲುವಾದಿ, ಸಂತೋಷ ಚಿತ್ರಗಾರ, ಮಲ್ಲು ಅಚ್ಚನಗೌಡ್ರ, ಶಂಕರ ಮನ್ನೇರಿ ಸೇರಿದಂತೆ ಮತ್ತಿತರರು ಇದ್ದರು.