Advertisement

ಜಿಲ್ಲೆ ವಿಭಜನೆ ಖಂಡಿಸಿ ಪತ್ರ ಚಳವಳಿ : ನ್ಯಾಯಾಧೀಶರಿಗೆ ಪೋಸ್ಟ್‌ ಕಾರ್ಡ್‌ ರವಾನೆ

04:09 PM Dec 05, 2020 | sudhir |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ವಿಭಜನೆ ಖಂಡಿಸಿ, ಅಖಂಡ ಜಿಲ್ಲೆಯಾಗಿ ಮುಂದುವರೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಸೈನ್ಯ ಸಂಘಟನೆಯು ರಾಜ್ಯ ಉತ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಅಂಚೆ ಚೀಟಿಗಳನ್ನು ರವಾನಿಸುವ ಮೂಲಕ ತೆರೆದ ಅಂಚೆ ಚಳವಳಿಗೆ ಶುಕ್ರವಾರ ಚಾಲನೆ ನೀಡಿತು.

Advertisement

ರಾಜ್ಯ ಸರ್ಕಾರವು ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಲು ಸಚಿವ ಸಂಪುಟದಲ್ಲಿ ಈಚೆಗೆ ತಾತ್ವಿಕ ಒಪ್ಪಿಗೆ ಪಡೆದಿದೆ. ಈ ವಿಭಜನೆಯನ್ನು ಖಂಡಿಸಿ ಉತ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಅಂಚೆ ಚೀಟಿಗಳನ್ನು ರವಾನಿಸಲಾಗಿದೆ. ರಾಜ್ಯದ
ಆರೂವರೆ ಕೋಟಿಗಿಂತಲೂ ಅಧಿಕ ಜನಸಂಖ್ಯೆ ಹೊಂದಿರುವ ಕರ್ನಾಟಕವು 30 ಜಿಲ್ಲೆಗಳನ್ನು ಹೊಂದಿದ್ದು, ಬಳ್ಳಾರಿ ಒಂದು ಪ್ರಮುಖ ಐತಿಹಾಸಿಕ ಹಿನ್ನೆಲೆಯುಳ್ಳ ಜಿಲ್ಲೆಯಾಗಿದೆ. ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ಪ್ರಾಮುಖ್ಯತೆಯನ್ನು
ಪಡೆದಿದೆ. ಇಲ್ಲಿಯವರೆಗೂ ಯಾವುದೇ ಅಶಾಂತಿ, ಕೋಮುಗಲಭೆ, ದೊಂಬಿಗಳಿಲ್ಲದೇ ಇಲ್ಲಿಯ ಜನ ಶಾಂತಿಯುತವಾದ ಜೀವನ ನಡೆಸುತ್ತಿದ್ದಾರೆ. ಆದರೆ ಡಿ. 17ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿ, ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆಯ ರಚನೆ ಮಾಡಿರುವುದರಿಂದ ಗೊಂದಲ ಸೃಷ್ಟಿಸಿ ಅಶಾಂತಿಗೆ ಕಾರಣವಾಗಿದೆ ಎಂದು
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕೆ. ಎರ್ರಿಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬಿಬಿಎಂಪಿ ಚುನಾವಣೆ ಹಿನ್ನಲೆ: ಬೆಂಗಳೂರಿನಲ್ಲಿ ಬಿಜೆಪಿ ಸಚಿವರು, ಶಾಸಕರ ಸಭೆ

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಕಂಪ್ಲಿ, ಸಂಡೂರು, ಸಿರುಗುಪ್ಪ, ಕುರುಗೋಡು, ಬಳ್ಳಾರಿ ಮತ್ತು ಬಳ್ಳಾರಿ ಗ್ರಾಮೀಣ ಭಾಗಗಳನ್ನೊಳಗೊಂಡ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಮತ್ತು ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೊಸ  ಪೇಟೆಯನ್ನು ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡಿಸಿ ವಿಭಜಿಸಿರುವುದರ ಹಿಂದೆ ರಾಜಕೀಯ
ದುರುದ್ದೇಶವಲ್ಲದೇ ಮತ್ತೇನೂ ಇಲ್ಲ. ಪ್ರಸ್ತಾಪಿತ ಬಳ್ಳಾರಿ ವಿಭಜನೆ ರಾಜಕೀಯ ದುರುದ್ದೇಶದಿಂದ ಪ್ರೇರಿತವಾಗಿದೆ. ವಿಭಜನೆಗೆ ಮುಂಚೆ ಜನಾಭಿಪ್ರಾಯ ಪಡೆದಿದ್ದೀರಾ? ಯಾವುದೇ ವಿಶೇಷ ತಜ್ಞರ ಸಮಿತಿ ರಚನೆ ಮಾಡಿ ಸಲಹೆ-ಸೂಚನೆ ಕೇಳಿದ್ದೀರಾ? ಭೌಗೋಳಿಕವಾಗಿ ಬಳ್ಳಾರಿಗಿಂತಲೂ ಹಿರಿದಾದ/ದೊಡ್ಡದಾದ ಜಿಲ್ಲೆಗಳ ಬಗ್ಗೆ ಯೋಚನೆ ಇಲ್ಲವೇ ಎಂದವರು ಪ್ರಶ್ನಿಸಿದ್ದಾರೆ.
ಬಳ್ಳಾರಿ ಭಾಗದ/ಜಿಲ್ಲೆಯ ಜನರ ಬೇಡಿಕೆಯೇ ಇಲ್ಲದೇ ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಒಬ್ಬ ವ್ಯಕ್ತಿಗೆ ಸಹಾಯ
ಮಾಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು ಅದನ್ನು ಪ್ರಶ್ನಿಸುವ ತಾಕತ್ತು ವಿರೋಧ ಪಕ್ಷವೂ ತೋರದಿರುವುದು ಪ್ರಜಾಪ್ರಭುತ್ವದ ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಉಪಾಧ್ಯಕ್ಷ ಬಿ. ಹೊನ್ನೂರಪ್ಪ, ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣಶೆಟ್ಟಿ, ಚೆಂಚಯ್ಯ, ಫಯಾಜ್‌ ಬಾಷಾ, ನಾಸೀರ್‌, ರಾಧಾಕೃಷ್ಣ, ಮುರಳಿ, ಗುರುರಾಜ್‌, ಚಿಟ್ಟಿ, ಆನಂದ್‌, ಶ್ರೀನಿವಾಸ್‌ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next