Advertisement

ಅತೃಪ್ತ ಶಾಸಕರ ನಡೆ ವಿರುದ್ಧ ಪ್ರತಿಭಟನೆ

03:54 PM Jul 09, 2019 | Team Udayavani |

ಮದ್ದೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರೆಸಾರ್ಟ್‌ ರಾಜಕೀಯ ಮಾಡುತ್ತಿರುವ ಅತೃಪ್ತ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಸೋಮವಾರ ಸಂಜೆ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಪ್ರವಾಸಿಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ವೃತ್ತದ ಬಳಿ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಘೋಷಣೆ ಕೂಗಿ ಮೈಸೂರು ಬೆಂಗಳೂರು ಹೆದ್ದಾರಿ ತಡೆ ನಡೆಸಿದರು.

ರಾಜೀನಾಮೆ ನೀಡಿರುವ 13 ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ಅಂಗೀಕರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯಾದ್ಯಂತ ಬೀಕರ ಬರಗಾಲ ವ್ಯಾಪಿಸಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಜರುಗುತ್ತಿದ್ದು ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಿಗದೆ ಪರಿತಪಿಸುವ ಜತೆಗೆ ರೈತರು ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದರೂ ಇದನ್ನು ಲೆಕ್ಕಿಸದೆ ರೆಸಾರ್ಟ್‌ ರಾಜಕೀಯಕ್ಕೆ ಮುಂದಾಗುವ ಮೂಲಕ ರಾಜ್ಯದ ಜನರಿಗೆ ಅನ್ಯಾಯವೆಸಗುತ್ತಿರುವುದಾಗಿ ದೂರಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಗಮನಹರಿಸದೆ ತಮ್ಮ ಅಧಿಕಾರದ ಆಸೆಗಾಗಿ ದುಭಾರಿ ಹೋಟೇಲ್ಗಳಲ್ಲಿ ರಾಜಕೀಯಕ್ಕೆ ಮುಂದಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು ಇಂತಹ ರಾಜಕಾರಣಿಗಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯೊಡ್ಡಲು ಮುಂದಾದಲ್ಲಿ ಪೊರಕೆ ಚಳವಳಿ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.

Advertisement

ಕೂಡಲೇ ರೆಸಾರ್ಟ್‌ ರಾಜಕೀಯವನ್ನು ಬದಿಗೊತ್ತಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸುವಂತೆ ಒತ್ತಾಯಿಸಿದರಲ್ಲದೇ ಇಂತಹದ್ದೇ ರಾಜಕೀಯ ದೊಂಬರಾಟಕ್ಕೆ ಶಾಸಕರು ಮುಂದಾದಲ್ಲಿ ಕ್ಷೇತ್ರದ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಕೆ ನೀಡಿದರು. ಈ ವೇಳೆ ಸಂಘಟನೆಯ ತಾಲೂಕು ಅಧ್ಯಕ್ಷ ಸಿದ್ದೇಗೌಡ, ಕಾರ್ಯದರ್ಶಿ ಚುಂಚಹಳ್ಳಿ ಸುರೇಶ್‌, ಪದಾಧಿಕಾರಿಗಳಾದ ಕೆ. ಸುರೇಶ್‌, ಮಾರಸಿಂಗನಹಳ್ಳಿ ರಾಮಚಂದ್ರು, ಮಲ್ಲರಾಜು, ಶಿವಣ್ಣ, ಶಂಕರ್‌, ಆನಂದ್‌, ಸಿದ್ದರಾಜು, ರಮೇಶ್‌, ಚನ್ನೇಶ, ಯೋಗೇಶ್‌, ಸಿ.ಎಸ್‌. ಶಂಕರ್‌, ಕಾಳೀರಯ್ಯ ನೇತೃತ್ವವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next