ದೇವನಹಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಖಂಡಿಸಿ, ತಾಲೂಕು ಪ್ರಜಾ ವಿಮೋಚನಾ ಚಳುವಳಿ ಸ್ವಾಭಿಮಾನ, ರಿಪಬ್ಲಿಕನ್ ಸೇನೆ , ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಮಿನಿ ವಿಧಾನ ಸೌಧದ ಆವರಣದ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್‌ರಿಗೆ ಅಪಮಾನ: ಭಾರತದ ಸಂವಿಧಾನವನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬರೆದಿದ್ದಾರೆ ಎಂದು ತಿಳಿದಿದ್ದರೂ, ಉದ್ದೇಶಪೂರ್ವಕವಾಗಿ ಶಿಕ್ಷಣ ಇಲಾಖೆ ಅಂಬೇಡ್ಕರ್ ಸಂವಿಧಾನವನ್ನು ಬರೆದಿಲ್ಲ. ಅವರು ಕೇವಲ ಸಂವಿಧಾನ ಕರುಡು ಸಮಿತಿಯ ಅಧ್ಯಕ್ಷರಾಗಿದ್ದರಷ್ಟೇ, ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ನಮ್ಮ ಸಂವಿಧಾನವನ್ನು ಬರೆಯಲಾಗಿದೆ ಎಂದು ಮುದ್ರಿಸಿ ಸುತ್ತೋಲೆ ಹೊರಡಿಸುವ ಮೂಲಕ ಸರ್ಕಾರ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ ಎಂದು ಘೋಷಣೆ ಕೂಗಿದರು. ಹಾಗೂ ಮಕ್ಕಳ ಮನಸ್ಸಿನಲ್ಲಿ ಮನುವಾದಿ ಬೀಜವನನು ಬಿತ್ತಲು ಹೊರಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಜಾ ಮಾಡಲು ಆಗ್ರಹ: ಈ ಸುತ್ತೋಲೆ ಹೊರಡಿಸಲು ಕಾರಣವಾದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಕೂಡಲೇ ವಜಾ ಗೋಳಿಸಬೇಕು ಎಂದು ಆಗ್ರಹಿಸಿದರು. ಸಚಿವರಿಗೆ ಇಲಾಖೆಯ ಮೇಲೆ ಹಿಡಿತವಿಲ್ಲ: ಮೇಲೆ ಶಿಕ್ಷಣಇಲಾಖೆ ಮತ್ತು ಸರ್ಕಾರದ ನಡವಳಿಕೆಗಳು ಬದಲಾಗದಿದ್ದರೆ, ನಾಡಿನ ಎಲ್ಲಾ ದಲಿತ ಸಂಘಟನೆಗಳೊಂದಿಗೆ ಶಿಕ್ಷಣ ಇಲಾಖೆಯ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಚಿವರಾಗಿದ್ದರೂ ಸಹ ಇಲಾಖೆಯ ಮೇಲೆ ಹಿಡಿತವಿಲ್ಲ. ಇಲಾಖೆಯ ಅಧಿಕಾರಿಗಳದ್ದು ಆಡಿದ್ದೇ ಆಟ ಎಂಬಂತಾಗಿದೆ. ಬಿಜೆಪಿ ಸರ್ಕಾರದ ಈ ಅಂಬೇಡ್ಕರ್ ಸುತ್ತೋಲೆ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಜಾಣ ಮೌನವಹಿಸಿ,ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ವಿರೋಧಿ: ಇತಿಹಾಸ ಅರಿಯದ ಇಂತಹ ದಲಿತ ವಿರೋಧಿ ಅಧಿಕಾರಿಗಳು ಶಿಕ್ಷಣ ಇಲಾಖೆಯನ್ನು ಹಾಳು ಮಾಡಿಮಕ್ಕಳಲ್ಲಿ ಅಂಬೇಡ್ಕರ್ ಸಾಧನೆಯನ್ನು ಗೌಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್,ಪ್ರಜಾ ವಿಮೋಚನಾ ಚಳುವಳಿ ಸ್ವಾಭಿಮಾನ ರಾಜ್ಯಾಧ್ಯಕ್ಷ ಮುನಿ ಆಂಜನಪ್ಪ ,ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಿವಿಸಿ ಸ್ವಾಭಿಮಾನ ಅಧ್ಯಕ್ಷ ಹನುಮಣ್ಣ ಗುಳ್ಯ, ತಾಲೂಕು ಪಿವಿಸಿ ಸ್ವಾಭಿಮಾನ ಅಧ್ಯಕ್ಷ ಸೋಲೂರು ನಾಗರಾಜ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಸುಕನ್ಯಮ್ಮ, ಜಿಲ್ಲಾ ಜಾಲ ಹೋಬಳಿ ಅಧ್ಯಕ್ಷ ನಾರಾಯಣಸ್ವಾಮಿ, ಯಲಹಂಕ ಅಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ವೆಂಕಟೇಶ್, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಆಯೂಫ್ ಖಾನ್, ಸಂಘಟನಾ ಕಾರ್ಯದರ್ಶಿ ಚನ್ನ ಮರಿಯಪ್ಪ, ಮಹಿಳಾ ಅಧ್ಯಕ್ಷೆ ಮುನಿ ಲಕ್ಷ್ಮಮ್ಮ ಸೇರಿದಂತೆ ಮತ್ತಿತರರು ಭಾಗವವಹಿಸಿದ್ದರು.