ಉಡುಪಿ: ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತರು ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆಯಿತು.
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಬಳಿ ಉಡುಪಿ ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನೆ ನಡೆಸುತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಜಗದೀಶ್ ಆಗಮಿಸಿದರೂ ಅಹವಾಲು ಆಲಿಸದೆ ಇರುವುದರಿಂದ ಆಕ್ರೋಶಗೊಂಡ ರೈತರು ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಿದರು. ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಛೇರಿ ಆವರಣದೊಳಗೆ ನುಗ್ಗಿದರು.
ಆವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ದಿಕ್ಕಾರ ಕೂಗಿದರು. ಆವರಣದೊಳಕ್ಕೆ ಪ್ರತಿಭಟನಕಾರರನ್ನು ಬಿಟ್ಟಿದ್ದಕ್ಕೆ ಪೊಲೀಸರಿಗೆ ತರಾಟೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ನಂತರ ಎಲ್ಲಾ ಪ್ರತಿಭಟನಾಕಾರರನ್ನು ಕಚೇರಿ ಆವರಣದಿಂದ ಹೊರಕ್ಕೆ ಕಳುಹಿಸಲಾಯಿತು. ನಂತರ ಆವರಣದ ಹೊರಗೆ ಕಾದು ಕುಳಿತ ಪ್ರತಿಭಟನಕಾರರ ಬಳಿ ಬಂದ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದರು.
ಸುಮಾರು 18 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ.