ರಾಮನಗರ: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರನ್ನು ಅಕ್ರಮ ಹಣ ಸಾಗಾಟ ಆರೋಪದ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿದ ಪ್ರಕರಣವನ್ನು ಖಂಡಿಸಿ ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ.
ಡಿ ಕೆ ಶಿವಕುಮಾರ್ ಅವರ ಅಭಿಮಾನಿಗಳು ಬುಧವಾರ ಬೆಳಿಗ್ಗೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಯುತ್ತಿದೆ.
ಬಂದ್ ಗೆ ಕಾಂಗ್ರೆಸ್ ಜೆಡಿಎಸ್ ಕರೆ : ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ಬಂಧನವನ್ನು ವಿರೋಧಿಸಿ ರಾಮನಗರ ಬಂದ್ ಗೆ ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಕರೆಕೊಟ್ಟಿದೆ.
ವಾಹನ ಸವಾರರಿಗೆ ಬೆದರಿಕೆ: ಕಚೇರಿಗೆ ತೆರಳುವ ವಾಹನ ಸವಾರರಿಗೆ ಡಿಕೆಶಿ ಅಭಿಮಾನಿಗಳು ಬೆದರಿಕೆ ಒಟ್ಟಿರುವ ಪ್ರಕರಣ ನಡೆದಿದೆ. ವಾಹನ ಸಂಚಾರ ಮಾಡಿದರೆ ವಾಹನಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಲಾಗಿದೆ.
ವ್ಯಾಪಾರ ಸ್ಥಗಿತ: ಡಿಕೆಶಿ ಅವರ ಜಿಲ್ಲೆ ರಾಮನಗರ ಮತ್ತು ಸ್ವಕ್ಷೇತ್ರ ಕನಕಪುರದಲ್ಲಿ ಬಿಗುವಿನ ವಾತಾವರಣವಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಬ್ಧವಾಗಿದೆ.
ಬಸ್ ಸಂಚಾರ ಸ್ಥಗಿತ: ಪ್ರತಿಭಟನೆಯ ಕಾವು ಹೆಚ್ಚಾದಂತೆ ರಾಮನಗರದಲ್ಲಿ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ. ಕನಕಪುರ ಕೆಎಸ್ ಆರ್ ಟಿಸಿ ಡಿಪೋ ದಿಂದ ಯಾವುದೇ ಬಸ್ ಗಳನ್ನು ರಸ್ತೆಗಿಳಿಸಿಲ್ಲ. ಕಲ್ಲು ತೂರಾಟ, ಬೆಂಕಿ ಹಚ್ಚಿದ ಪ್ರಕರಣಗಳು ನಡೆದ ಹಿನ್ನಲೆಯಲ್ಲಿ ಬಸ್ ಚಾಲಕರು ಮತ್ತು ನಿರ್ವಾಹಕರು ಈ ನಿರ್ಧಾರ ಕೈಗೊಂಡಿದ್ದಾರೆ.
ಇಬ್ಬರ ಬಂಧನ: ಡಿಕೆಶಿ ಬಂಧನ ಖಂಡಿಸಿ ನಿನ್ನೆಯಿಂದ ಈವರೆಗೆ ಡಿಕೆಶಿ ಅಭಿಮಾನಿಗಳು ಒಟ್ಟು 12 ಕೆಎಸ್ ಆರ್ ಟಿಸಿ ಬಸ್ ಗಳಿಗೆ ಕಲ್ಲು ತೂರಾಟ ನಡೆದಿರುವ ಬಗ್ಗೆ ವರದಿಯಾಗಿದೆ. ಮಂಗಳವಾರ ರಾತ್ರಿ ಬಸ್ ಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಕನಕಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.