Advertisement

ಮರ್ಯಾದೆ ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆ

03:07 PM Nov 07, 2020 | Suhan S |

ಮಂಡ್ಯ: ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ ಹಾಗೂ ಕುಟುಂಬಸ್ಥರು ಮರ್ಯಾದೆಗೆ ಅಂಜಿ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ದಲಿತ ಹೆಣ್ಣು ಮಗಳು ಮೇಘಶ್ರೀ ಅವಳನ್ನು ಕೊಲೆ ಮಾಡಿದ್ದಾರೆ. ಆದ್ದರಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ದಸಂಸ, ಸಿಐಟಿಯು, ಜನವಾದಿ, ಜನಶಕ್ತಿ, ಮಹಿಳಾ ಮುನ್ನಡೆ, ರೈತಸಂಘ ಸೇರಿದಂತೆ ಇನ್ನಿತರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ತಮಟೆ ಚಳವಳಿ ಮೆರವಣಿಗೆ: ನಗರದ ರೈತ ಸಭಾಂಗಣದಿಂದ ತಮಟೆ ಚಳವಳಿ ಮೆರವಣಿಗೆ ಮೂಲಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ ಅವರು, ಸರಿಯಾಗಿ ತನಿಖೆನಡೆಸದೆ ನಿರ್ಲಕ್ಷ್ಯ ವಹಿಸಿರುವ ಡಿವೈಎಸ್‌ಪಿ ಅರುಣ್‌ ನಾಗೇಗೌಡ ಹಾಗೂ ಪಾಂಡವಪುರ ಸರ್ಕಲ್‌ ಇನ್ಸ್‌ ಪೆಕ್ಟರ್‌ ಪ್ರಭಾಕರ್‌ ಅವರನ್ನು ಅಮಾನತು ಗೊಳಿಸಬೇಕು ಎಂದು ಒತ್ತಾಯಿಸಿದರು.

ಸಾಕ್ಷಿ ಇದ್ದರೂ ಕ್ರಮವಹಿಸಿಲ್ಲ: ದಸಂಸ ಮುಖಂಡ ಗುರುಪ್ರಸಾದ್‌ಕೆರಗೋಡು ಮಾತನಾಡಿ, ಮೇಘಶ್ರೀಯನ್ನು ಹತ್ಯೆ ಮಾಡಿರುವುದು ಎಲ್ಲಾ ಸಾಕ್ಷಿಯಾಧಾರಗಳು ಇದ್ದರೂ ಶ್ರೀರಂಗಪಟ್ಟಣ ಡಿವೈಎಸ್‌ಪಿ ಅರುಣ್‌ ನಾಗೇಗೌಡ ಮತ್ತು ಸರ್ಕಲ್‌ ಇನ್ಸ್‌ಪೆಕ್ಟರ್‌ ಪ್ರಭಾಕರ್‌ ಯಾವುದೇ ಕ್ರಮ ಕೈಗೊಳ್ಳದೆ ಆರೋಪಿ ಪರ ನಿಂತಿದ್ದು, ಕರ್ತವ್ಯ ಲೋಪ ಎಸಗಿದ ಇಬ್ಬರನ್ನು ಕೂಡಲೇ ಅಮಾನತು ಮಾಡಿ ಬೇರೆ ಪ್ರಾಮಾಣಿಕ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಮ್ಮ ನೇರ ಉಸ್ತುವಾರಿಯಲ್ಲಿ ಪ್ರಕರಣದಲ್ಲಿ ನ್ಯಾಯ ದೊರಕಿಸಬೇಕು. ಹಲವು ವರ್ಷಗಳ ಹಿಂದೆ ನಡೆದು ಮುಚ್ಚಿ ಹೋಗಿದ್ದ ಘಟನೆಯಲ್ಲಿ ಸತ್ಯವನ್ನು ಹೊರತರಬೇಕು ಎಂದು ಆಗ್ರಹಿಸಿದರು.

ಅರಿವು ಮೂಡಿಸಲು ಮುಂದಾಗಿ: ಮರ್ಯಾದೆಗೇಡು ಹತ್ಯೆಗಳು ಆಧುನಿಕ ಕಾನೂನುಬದ್ಧ ಸಮಾಜಕ್ಕೊಂದು ಕಪ್ಪುಚುಕ್ಕೆ ಭಾರತದ ಸಂವಿಧಾನದ ಜಾತ್ಯಾತೀತೆಯ ಆಶಯವನ್ನು ಎತ್ತಿಹಿಡಿಯುತ್ತಾ, ಮರ್ಯಾದೆಗೇಡು ಹತ್ಯೆಗಳು ಪದೇ ಪದೇ ನಡೆಯುತ್ತಿರುವ ಮಂಡ್ಯ ಜಿಲ್ಲೆಯಲ್ಲಿ ಇದರ ವಿರುದ್ಧ ಅರಿವು ಮೂಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ತಿರುಮಲಾಪು ಗ್ರಾಮದ ಟಿ.ಕೆ.ಸ್ವಾಮಿ ಕುಟುಂಬದವರು ಮೇಘಶ್ರೀಯನ್ನು ಗ್ರಾಮದ ಹೊರ ಭಾಗದ ಗದ್ದೆಯಲ್ಲಿ ಹತ್ಯೆ ಮಾಡಿ, ಬಿಸಾಕಿರುವುದು ಸಾಭೀತಾದರೂ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣವೇನು?, ಅವರಿಗೂ ಇವರಿಗೂ ನಂಟು ಇದೆಯೇ ಎಂದು ಪ್ರಶ್ನೆ ಮಾಡಿದರು.

ಐದು ವರ್ಷದ ಹಿಂದೆ ನಡೆದ ಪ್ರಕರಣ:ಕಳೆದ ಐದು ವರ್ಷಗಳ ಹಿಂದೆ ನಡೆದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆದರೆ, ಇದನ್ನು ಸಮರ್ಪಕವಾದ ತನಿಖೆ ಮಾಡಲು ಮುಂದಾಗದಿರುವುದು ಖಂಡನಾರ್ಹ. ಮಹಾ ದೇವಮ್ಮ ಪೊಲೀಸರು ನೀಡಿದ ಯುವತಿಯ ಫೋಟೋವನ್ನು ಗುರುತಿಸಿ ಇದು ನನ್ನ ಮಗಳೇ ಎಂದು ಹೇಳಿದರೂ ಕ್ರಮ ಕೈಗೊಳ್ಳದೆ ಅವರನ್ನೇ ತಪ್ಪು ಮಾಡಿದ್ದೀಯಎನ್ನುವ ರೀತಿಯಲ್ಲಿಪ್ರಶ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಎಸ್ಪಿಯವರು ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಮುಂದೆ ಇಂತಹ ಪ್ರಕರಣಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

Advertisement

ಹತ್ಯೆ ಪ್ರಕರಣಗಳು ಹೆಚ್ಚಳ: ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆಬಂದಾಗಿನಿಂದಲೂ ದೇಶದಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ಹೆಚ್ಚುಗುತ್ತಿವೆ. ಹತ್ರಾಸ್‌ನಲ್ಲಿ ನಡೆದ ಪ್ರಕರಣಕ್ಕೂ ಸಹ ಈವರೆಗೂ ಸರಿಯಾದ ನ್ಯಾಯಸಿಗಲಿಲ್ಲ. ಆದೇ ತಿರುಮಲಾಪುರ ಗ್ರಾಮದಲ್ಲಿ ನಡೆದ ಮೇಘಶ್ರೀ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಾಕ್ಷಿಗಳು ಕಣ್ಣ ಮುಂದೆ ಇದ್ದರೂಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಇದರ ಬಗ್ಗೆ ಎಸ್ಪಿಯವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಕರಾದಸಂಸ ಖಜಾಂಚಿ ಕೆಂಪಯ್ಯಸಾಗ್ಯ, ಕೃಷ್ಣ, ಕುಬೇರಪ್ಪ, ದೇವರಾಜು, ಹುರುಗಲವಾಡಿ ರಾಮಯ್ಯ, ಆರ್‌.ಕೃಷ್ಣ, ಜನವಾದಿ ಮಂಜುಳಾ, ಸುಶೀಲ, ಮಹಿಳಾ ಮುನ್ನಡೆಯ ಪೂರ್ಣಿಮಾ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ನಾಗೇಶ್‌, ಕುಮಾರ್‌ ಸೇರಿದಂತೆ ವಿವಿಧ ಸಂಘಟನೆ ಮುಖಂಡರು,ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಣ್ಣ ಮುಂದೆ ಸಾಕ್ಷಿಗಳಿದ್ದರೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧಕ್ರಮ ಕೈಗೊಳ್ಳದ ಡಿವೈಎಸ್‌ಪಿ ಅರುಣ್‌ ನಾಗೇಗೌಡ ಹಾಗೂ ಸರ್ಕಲ್‌ ಇನ್ಸ್‌ಪೆಕ್ಟರ್‌ ಪ್ರಭಾಕರ್‌ ಅವರನ್ನು ಅಮಾನತುಗೊಳಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನ್ಯಾಯಒದಗಿಸಬೇಕು. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗುರುಪ್ರಸಾದ್‌ಕೆರಗೋಡು, ಮುಖಂಡ, ದಸಂಸ

Advertisement

Udayavani is now on Telegram. Click here to join our channel and stay updated with the latest news.

Next