Advertisement

ಭ್ರಷ್ಟಾಚಾರ-ಬೆಲೆ ಏರಿಕೆ ವಿರುದ್ದ ಪ್ರತಿಭಟನೆ

03:13 PM Apr 18, 2022 | Team Udayavani |

ಚಿತ್ರದುರ್ಗ: ಬಿಜೆಪಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಏ.18 ಸೋಮವಾರ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್‌ ಹೇಳಿದರು.

Advertisement

ಭಾನುವಾರ ಜಿಲ್ಲಾ ಕಾಂಗ್ರೇಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಶೇ. 40ರಷ್ಟು ಕಮೀಷನ್‌ ವ್ಯವಹಾರ ನಡೆಯುತ್ತಿದೆ. ಕಮೀಷನ್‌ ಇಲ್ಲದೆ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ ಎಂದು ದೂರಿದರು.

‘ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ’ ಎಂದು ಹೇಳುವ ಪ್ರಧಾನಮಂತ್ರಿ ಇರುವ ಪಕ್ಷದ ನೇತೃತ್ವದ ಸರ್ಕಾರದಲ್ಲಿ ಗುತ್ತಿಗೆದಾರರು ಕಮೀಷನ್‌ ಕೊಡಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರಂತ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಖುದ್ದು ಪ್ರಧಾನಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಕಮಿಷನ್‌ ಭ್ರಷ್ಟಾಚಾರಕ್ಕೆ ಬೇಸತ್ತು ಜೀವವನ್ನೇ ಕಳೆದುಕೊಳ್ಳಬೇಕಾಯಿತು. ಸಚಿವರಾಗಿದ್ದ ಈಶ್ವರಪ್ಪ ಅವರ ಮೇಲೆ ನೇರವಾಗಿ ಆರೋಪ ಮಾಡಿದರೂ ಕಾನೂನು ಕ್ರಮ ಜರುಗಿಸದೆ ರಾಜೀನಾಮೆ ಪಡೆದುಕೊಂಡು ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಾಜ್‌ಪೀರ್‌ ಅಸಮಧಾನ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಹಾಲಸ್ವಾಮಿ ಮಾತನಾಡಿ, ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಜನಸಾಮಾನ್ಯರು ಬದುಕುವುದೇ ದುಸ್ತರವಾಗಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಇರುವ ಯಾವ ರಾಜ್ಯದಲ್ಲೂ ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದರು.

ದೆಹಲಿ, ಪಂಜಾಬ್‌ ಸರ್ಕಾರಗಳು ಜನರಿಗೆ ಉಚಿತ ವಿದ್ಯುತ್‌ ನೀಡುತ್ತಿವೆ. ಆದರೆ ಬಿಜೆಪಿ ಬಾಯಲ್ಲಿ ಮಾತ್ರ ಬಡವರ ಪರ, ಭ್ರಷ್ಟಾಚಾರ ವಿರೋಧವಾಗಿ ಮಾತನಾಡುತ್ತಾ, ಅನಾಚಾರ ಮಾಡುತ್ತಿದೆ. ಈ ಎಲ್ಲಾ ಕಾರಣಗಳನ್ನಿಟ್ಟುಕೊಂಡು ಏ. 18ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇದರ ನೇತೃತ್ವವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಆಹಮ್ಮದ್‌ ವಹಿಸಲಿದ್ದಾರೆ. ಆಟೋ ಚಾಲಕರು, ಖಾಸಗಿ ಬಸ್‌ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರು ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದೇವೆ ಎಂದು ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ಕುಮಾರ್‌, ಮೈಲಾರಪ್ಪ, ನಗರ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮೀಕಾಂತ್‌, ಮುದಾಸಿರ್‌, ಯುವ ಮುಖಂಡ ರಘು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next