Advertisement

ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ

04:13 PM Dec 12, 2019 | Suhan S |

ಮುಳಬಾಗಿಲು: ನೋಂದಣಿ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ, ದಲ್ಲಾಳಿಗಳಿಗೆ ಕಡಿವಾಣ, ಅಕ್ರಮಗಳಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ನೋಂದಣಿ ಇಲಾಖೆ ಎದುರು ಪ್ರತಿಭಟನೆ ನಡೆಸಿ, ಉಪ ನೋಂದಣಾಧಿಕಾರಿ ಬೈರಾರೆಡ್ಡಿಗೆ ಮನವಿ ಸಲ್ಲಿಸಿದರು.

Advertisement

ದಲ್ಲಾಳಿಗಳಿಂದ ನೋಂದಣಿ ಕಚೇರಿ ರಕ್ಷಿಸಿ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಸರ್ಕಾರಿ ಗೋಮಾಳ ಗುಂಡು, ತೋಪು, ಕೆರೆ ಹಾಗೂ ಪಿ ನಂಬರ್‌ ಹೊಂದಿರುವ ಜಮೀನು ಮತ್ತು ಸರ್ಕಾರದಿಂದ ಮಂಜೂರಾಗಿರುವ 50, 53, 57 ನಮೂನೆ ಜಮೀನುಗಳನ್ನು 15 ವರ್ಷ ಮಾರಾಟ ಹಾಗೂ ನೋಂದಣಿ ಮಾಡ ಬಾರದು ಎಂದು ಸರ್ಕಾರದ ಆದೇಶವಿದೆ. ಆದರೆ ನೋಂದಣಿ ಕಚೇರಿಯಲ್ಲಿ ಅಧಿಕಾರಿಗಳು ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಜತೆಗೆ ಕಾರ್ಪೋರೇಟ್‌ ಹಾಗೂ ರಿಯಲ್‌ ಎಸ್ಟೇಟ್‌ ದಂಧೆಕೋರರು, ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ವ್ಯಾಪಕ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದರಿಂದ ಬಡವರು, ಒಂದು ಗುಂಟೆ ಜಮೀನು ನೋಂದಣಿ ಮಾಡಿಸಬೇಕಾದರೆ, ನೂರೆಂಟು ಕಾನೂನು ಹೇಳಿ ವಾಪಸ್‌ ಕಳುಹಿಸಿದ್ದಾರೆ. ಆದರೆ ಬಡವರು ದಲ್ಲಾಳಿಗಳ ಮೂಲಕ ಹಣ ಖರ್ಚು ಮಾಡಿಕೊಂಡು ಬಂದರೆ ಅಡೆ ತಡೆಯಿಲ್ಲದೇ ಕೆಲಸ ಮಾಡಿಕೊಡುತ್ತಾರೆ. ಮೂಲಕ ನೋಂದಣಿ ಇಲಾಖೆಯನ್ನು ಅಡವಿಟ್ಟಿದ್ದಾರೆ. ಇದರಿಂದ ಬಡವರು ತಮ್ಮ ಸಣ್ಣ ಕೆಲಸಗಳಿಗಾಗಿ ದಲ್ಲಾಳಿಗಳ ಹಿಂದೆ ತಿರುಗಬೇಕಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲು: ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌ ಮಾತನಾಡಿ, ಜಮೀನಿನ ಬೆಲೆಗೆ ತಕ್ಕಂತೆ ಸರ್ಕಾರಕ್ಕೆ ಶುಲ್ಕ ಪಾವತಿಸಬೇಕು. ಆದರೆ ಕೋಟಿ ರೂಪಾಯಿ ಬೆಲೆ ಬಾಳುವ ಜಮೀನಿಗೆ 10 ಲಕ್ಷ ಬೆಲೆ ತೋರಿಸಿ, 90 ಲಕ್ಷಕ್ಕೆ ಸರ್ಕಾರಕ್ಕೆ ಬರುವ ಆದಾಯವನ್ನು ಅಧಿಕಾರಿಗಳು ಮತ್ತು ದಲ್ಲಾಳಿಗಳು ಹಂಚುಕೊಳ್ಳುತ್ತಿದ್ದಾರೆ. ಅದರ ಜೊತೆಗೆ ನೋಂದಣಿಗೆ ಬರುವ ಜನ ಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳಿಲ್ಲ. ಜೊತೆಗೆ ಅಧಿಕಾರಿಗಳು, ಬಡವರ ಜಮೀನು ನೋಂದಣಿ ಮಾಡಬೇಕಾದರೆ ಸರ್ವರ್‌ ಸಮಸ್ಯೆ ಹಾಗೂ ನೂರೊಂದು ಸಮಸ್ಯೆ ಹೇಳುತ್ತಾರೆ. ಆದರೆ ದಲ್ಲಾಲಿಗಳು ಕಮೀಷನ್‌ ನೀಡಿದರೆ, ಅವರಿಗೆ ರಾಜ ಮರ್ಯಾದೆ ನೀಡುತ್ತಾರೆ. ಜತೆಗೆ ನೋಂದಣಿ ಮಾಡಿಕೊಡಲು ಸರ್ವರ್‌ ಸಮಸ್ಯೆ ಇರುವುದಿಲ್ಲವೆ? ಎಂದು ಪ್ರಶ್ನಿಸಿದರು.

ಬಾರಿಕೋಲು ಚಳವಳಿ ಎಚ್ಚರಿಕೆ: ಅಲ್ಲದೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಕಚೇರಿಯನ್ನು ದಲ್ಲಾಳಿಗಳಿಂದ ಮುಕ್ತಗೊಳಿಸಬೇಕು ಹಾಗೂ ಬಡವರ ಮತ್ತು ಜನಸ್ನೇಹಿಯಾಗಿ ಪರಿವರ್ತಿಸಬೇಕು. ಇಲ್ಲವಾದರೆ ನೋಂದಣಿ ಇಲಾಖೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಬಾರಿಕೋಲು ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತಾಲೂಕು ಅಧ್ಯಕ್ಷ ಪಾರುಕ್‌ ಪಾಷ, ಯಲುವಹಳ್ಳಿ ಪ್ರಭಾಕರ್‌, ರಾಜೇಶ್‌ಕಲೆ, ವಿಜಯ್‌ಪಾಲ್‌, ಅಣ್ಣೆಹಳ್ಳಿ ನಾಗರಾಜ್‌, ವೆಂಕಟರವಣಪ್ಪ, ನವೀನ್‌, ಕೇಶವ, ಸಾಗರ್‌, ಸುಪ್ರಿಂ ಚಲ, ಜುಬೇರ್‌ಪಾಷ, ಸಾಗರ್‌, ವೇಣು, ನವೀನ್‌, ರಂಜಿತ್‌ ಸುಧಾಕರ್‌, ನಂಗಲಿ ಕಿಶೋರ್‌, ಶಿವ, ಮಂಗಸಂದ್ರ ವೆಂಕಟೇಶಪ್ಪ, ತೆರ್ನಹಳ್ಳಿ ಆಂಜಿನಪ್ಪ, ಸಹದೇವಣ್ಣ, ಮೀಸೆ ವೆಂಕಟೇಶಪ್ಪ, ಹೊಸಹಳ್ಳಿ ವೆಂಕಟೇಶ್‌, ಈಕಂಬಳ್ಳಿ ಮಂಜುನಾಥ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next