ಅಂಕೋಲಾ: ತಾಲೂಕಿನ ಗುಂಡಬಾಳ ಮರಾಕಲ್ ಯೋಜನೆಯ ಗಂಗಾವಳಿ ನದಿ ನೀರನ್ನು ಕುಮಟಾ ತಾಲೂಕಿಗೆ ಸಾಗಿಸುವ ಯೋಜನೆಗೆ ವಿರೋಧವಿದ್ದರೂ ಬಳಲೆ ಬಳಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಸುತ್ತಿರುವ ಸ್ಥಳದಲ್ಲಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಮತ್ತು ಕುಮಟಾ ನೀರಾವರಿ ಅಧಿಕಾರಿ ಬೆದರಿಕೆ ಹಾಕಿರುವುದನ್ನು ಸಗಡಗೇರಿ ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಯೋಜನೆ ಕುರಿತು ಅನೇಕ ಭಾರಿ ಹೋರಾಟಗಳು ನಡೆಯುತ್ತಿದೆ. ಗುಂಡಬಾಳ ಮರಕಾಲ್ ಯೋಜನೆ ಗಂಗಾವಳಿ ನದಿ ನೀರನ್ನು ಅಂಕೋಲಾ ತಾಲೂಕಿನಗ್ರಾಮಗಳಿಗೆ ಮೊದಲು ನೀಡಿ ಆ ನಂತರ ಬೇರೆಯವರಿಗೆ ಒಯ್ಯಲು ತಮ್ಮದೇನು ತಕರಾರು ಇಲ್ಲ. ಆದರೆ ಅಂಕೋಲಾ ತಾಲೂಕಿನ ಜನರು ನೀರಿಗಾಗಿ ಪರತಪಿಸುತ್ತಿದ್ದಾರೆ.
ಆದಾಗ್ಯೂ ಬಳಲೆ ಗ್ರಾಮದಲ್ಲಿ ಮತ್ತೆ ಬೇರೆ ತಾಲೂಕಿಗೆ ನೀರನ್ನು ಸಾಗಿಸಲು ಪೈಪ್‌ಲೈನ್ ಅಳವಡಿಕೆ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಪ್ರತಿಭಟಿಸಲು ಹೋದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವಾರದ ಒಳಗೆ
ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸ್ಥಳೀಯ ಗುತ್ತಿಗೆದಾರ ಮೇಲೆ ಮತ್ತು ಅಧಿಕಾರಿಗಳ ಮೇಲೆ ಕ್ರಮ ಜರುಗಿಸದಿದ್ದರೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಹೋರಾಟ ಸಮಿತಿ ರವೀಂದ್ರ ನಾಯಕ, ಸತೀಶ ಗೌಡ, ಶ್ರವಣ ನಾಯ್ಕ, ಸುಬ್ಬಯ್ಯ ನಾಯಕ, ಸುಭಾಶ ನಾಯಕ, ಡಿ.ಜಿ. ನಾಯಕ, ಸುಮಿತ್ರಾ ಹರಿಕಂತ್ರ, ಸಣ್ಣಮ್ಮ ಹರಿಕಂತ್ರ, ಶಾಂತಾ ಆಗೇರ, ಮಾಸ್ತಿ ಹರಿಕಂತ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ