ಅಫಜಲಪುರ: ನೂತನ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲ ತಿಪ್ಪಿ ಅವರ ಧೊರಣೆ ಖಂಡಿಸಿ “ಹಿಟ್ಲರ್ ನೀತಿ ಅಳಿಸಿ. ಕಸಾಪ ಬೆಳೆಸಿ’ ಘೋಣೆಯೊಂದಿಗೆ ಕನ್ನಡ ಭವನಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೋರಾಟಗಾರ ಶ್ರೀಮಂತ ಬಿರಾದಾರ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಸಾಹಿತಿಗಳು ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಬೆಂಬಲಿಸಿ ಮಾತನಾಡಿದ ಅವರು, ತಾಲೂಕು ಕಸಾಪ ಅಧ್ಯಕ್ಷರ ನೇಮಕ ಏಕಪಕ್ಷಿಯವಾಗಿ ನಡೆದಿದೆ. ಯಾರಿಗೂ ಗೊತ್ತಿಲ್ಲದವರನ್ನು ಅಧ್ಯಕ್ಷ ಮಾಡಿದ್ದಾರೆ. ಒಬ್ಬ ತಾಲೂಕು ಅದ್ಯಕ್ಷರನ್ನು ಆಯ್ಕೆ ಮಾಡಬೇಕಾದರೆ ಕಸಾಪ ನಿಯಮಗಳು ಏನಿವೆ ಎನ್ನುವ ಸಾಮಾನ್ಯ ಪರಿಜ್ಞಾನವು ಇಲ್ಲದವರಂತೆ ವರ್ತಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ನಿಕಟಪೂರ್ವ ಅಧ್ಯಕ್ಷ, ಸದಸ್ಯರು, ಸಾಹಿತಿಗಳು, ಮುಖಂಡರಿಗೆ ಮಾಹಿತಿ ನೀಡಿ ದಿನಾಂಕ ನಿಗದಿಪಡಿಸಿ ಸಭೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗುತ್ತದೆ. ಆದರೆ ತೆಗಲತಿಪ್ಪಿ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನಸೋ ಇಚ್ಚೆ ವರ್ತಿಸುತ್ತಿದ್ದಾರೆ. ಈ ತಪ್ಪು ತಿದ್ದಿಕೊಂಡು ಎಲ್ಲರಿಗೂ ಒಪ್ಪಿಗೆಯಾಗುವ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಮಾಡಬೇಕು. ಇಲ್ಲದಿದ್ದರೇ ಜಿಲ್ಲಾ ಕನ್ನಡ ಭವನದ ಎದುರು ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಬಸಣ್ಣ ಗುಣಾರಿ ಮಾತನಾಡಿ, ತೇಗಲತಿಪ್ಪಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಪರಿಷತ್ ಗೆ ಪರ್ಯಾಯವಾಗಿ ಸಭೆ, ಸಮಾರಂಭ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿಕಟಪೂರ್ವ ಅಧ್ಯಕ್ಷ ಡಿ.ಎಂ ನದಾಫ್, ಸಾಹಿತಿಗಳಾದ ಬಿ.ಎಂ. ರಾವ್, ಅಬ್ಟಾಸಲಿ ನದಾಫ್, ಬಸವರಾಜ ನಿಂಬರ್ಗಿ, ಬಾಪುಗೌಡ ಬಿರಾದಾರ, ಪತ್ರಕರ್ತ ಶಿವಾನಂದ ಹಸರಗುಡಗಿ, ಶರಣಬಸಪ್ಪ ಅವಟೆ, ಮುಖಂಡರಾದ ರವಿ ಗೌರ, ಚಂದು ಕರ್ಜಗಿ, ರಾಹುಲ್ ಸಿಂಪಿ, ಶಿಕ್ಷಕ ಈರಂತಪ್ಪ ಜಮಾಣೆ ಮತ್ತಿತರರು ಪಾಲ್ಗೊಂಡಿದ್ದರು.