ಬೆಂಗಳೂರು: ಪ್ರಾಥಮಿಕ ಹಂತದ ತನಿಖೆ ನಡೆಸದೆ ಬಿಬಿಎಂಪಿ ಅಧಿಕಾರಿಗಳನ್ನು ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಸ್ವಾತಂತ್ರ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ ಪಾಲಿಕೆ ಅಧಿಕಾರಿಗಳು ಮತ್ತು ನೌಕರರು ಒಳಚರಂಡಿ ದುರಸ್ತಿ ಅಥವಾ ಸ್ವತ್ಛತಾ ಕೆಲಸಗಳ ಮೇಲುಸ್ತುವಾರಿಯನ್ನು ಪಾಲಿಕೆ ನೌಕರರ ಮೇಲೆ ಹೇರುವುದು ಸರಿಯಲ್ಲ. ಇಂತಹ ಕ್ರಮಗಳಿಂದ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ಮಾತನಾಡಿ, ವೈದ್ಯಾಧಿಕಾರಿ ಕಲ್ಪನಾ, ಕಾರ್ಯಪಾಲಕ ಎಂಜಿನಿಯರ್ ಮುನಿರೆಡ್ಡಿ ಹಾಗೂ ಆರೋಗ್ಯ ಪರಿವೀಕ್ಷಕ ದೇವರಾಜ್‌ರನ್ನು ಏಕಾಏಕಿ ಬಂಧಿಸಿರುವುದು ಸರಿಯಲ್ಲ. ಬಂಧನಕ್ಕೂ ಮೊದಲು ನೇಮಕಾತಿ ಪ್ರಾಧಿಕಾರದ ಅನುಮತಿ ಪಡೆಯದೆ, ಅವರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಖಂಡನೀಯ. ಅಧಿಕಾರಿಗಳನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ಪ್ರಕರಣಗಳಲ್ಲಿ ತನಿಖೆ ನಡೆಸದೆಯೇ ಅಧಿಕಾರಿಗಳನ್ನು ಬಂಧಿಸದಂತೆ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
-ರಾಮಲಿಂಗಾರೆಡ್ಡಿ, ಗೃಹ ಸಚಿವ
ದುರಂತಗಳು ನಡೆದಾಗ ಆಯುಕ್ತರು ಹಾಗೂ ನೇಮಕಾತಿ ಪ್ರಾಧಿಕಾರದ ಅನುಮತಿ ಪಡೆಯದೆ ಅಧಿಕಾರಿಗಳನ್ನು ಬಂಧನ ಮಾಡಬಾರದು. ಈ ಕುರಿತು ಕ್ರಮಕೈಗೊಳ್ಳುವಂತೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
-ಸಂಪತ್‌ರಾಜ್, ಬಿಬಿಎಂಪಿ ಮೇಯರ್