ಉದಯವಾಣಿ ಸಮಾಚಾರ
ಗಂಗಾವತಿ: ಸರ್ಕಾರದ ನಿಯಮ ಉಲ್ಲಂಘಿಸಿ ನಗರ ಮತ್ತು ಗ್ರಾಮೀಣ ಭಾಗದ ಖಾಸಗಿ ಶಾಲೆಗಳು ಪ್ರವೇಶ ನೆಪದಲ್ಲಿ ಪಾಲಕರಿಂದ ಲಕ್ಷಾಂತರ ರೂಪಾಯಿ ಫಸೂಲಿ ಮಾಡುತ್ತಿರುವುದನ್ನು ಖಂಡಿಸಿ ಎಸ್ಎಫ್ಐ ಕಾರ್ಯಕರ್ತರು ಬಿ ಇ ಓ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಗ್ಯಾನೇಶ್ ಕಡಗದ ಮಾತನಾಡಿ,2024-25 ನೇ ಸಾಲಿನ ಪ್ರವೇಶ ಶುಲ್ಕ. ಬಟ್ಟೆ. ಶೂ ಸಾಕ್ಸ್. ಟೈ ಬೆಲ್ಟ್ ಸ್ಮಾರ್ಟ್ ಕ್ಲಾಸ್ ಶುಲ್ಕ,ಟ್ಯೂಷನ್ ಶುಲ್ಕವನ್ನು ಹೆಚ್ಚಿಗೆ ಮಾಡಿ ಡೊನೇಷನ್ ವಸೂಲಿ ಮಾಡಲು ಮುಂದಾಗಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಗಂಗಾವತಿ ತಾಲೂಕು ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಅಖಂಡ ಗಂಗಾವತಿ ತಾಲೂಕಿನ ಬಹುತೇಕ ಎಲ್ಲಾ ಶಾಲೆಗಳು ಈಗಾಗಲೇ ಬೇಬಿ ಕ್ಲಾಸಿನಿಂದ ಎಲ್ಲಾ ತರಗತಿಯ ಪ್ರವೇಶಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳ ಪಾಲಕರಿಂದ ಡೊನೇಷನ್ ವಸೂಲಿಗೆ ಮುಂದಾಗಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾದರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೌನವಾಗಿರುವಾಗಿದ್ದಾರೆ.ಸರ್ಕಾರ ಇನ್ನು ಈ ವರ್ಷದ ಶೈಕ್ಷಣಿಕ ಪ್ರವೇಶಾತಿಯನ್ನು ಪ್ರಾರಂಭ ಮಾಡದಿದ್ದರೂ ಖಾಸಗಿ ಶಾಲೆಗಳು ತಿದಿಗಾಲಲ್ಲಿ ನಿಂತು ಪ್ರವೇಶಾತಿ ಶುಲ್ಕ ಹಾಗೂ ಬಟ್ಟೆ ಶುಲ್ಕ ನೋಟ್ಸ್ ಬುಕ್ಸ್ ಶಾಲೆಗಳಲ್ಲಿ ಮಾರಾಟ ಮಾಡುತ್ತಿರುವುದು ಕಾನೂನುಬಾಹಿರ. ಇಂತಹ ಶಾಲೆಗಳ ಮೇಲೆ ಹೆಚ್ಚಿನ ಕಾನೂನು ಕ್ರಮ ಜರುಗಿಸಬೇಕು.
2024-25 ನೇ ಶೈಕ್ಷಣಿಕ ವರ್ಷದ ವಾರ್ಷಿಕ ಶುಲ್ಕದಲ್ಲಿ ಕೇವಲ ಬೋಧನ ಶುಲ್ಕ ಮಾತ್ರ ವಸೂಲಿ ಮಾಡಬೇಕು. ಯಾವುದೇ ಕಾರಣಕ್ಕೂ ಆನ್ ಲೈನ್ ಮೂಲಕ ಶಿಕ್ಷಣ ನೀಡುವುದು ಸರಿಯಾದ ಕ್ರಮವಲ್ಲ. 1983ರ ಶಿಕ್ಷಣ ಕಾಯಿದೆ ಎಲ್ಲಾ ಖಾಸಗಿ ಶಾಲೆಗಳು ಪ್ರವೇಶಾತಿಗೆ ಖಾಲಿ ಇರುವ ಸೀಟುಗಳನ್ನು ನೋಟಿಸ್ ಬೋರ್ಡ್ ಗೆ ಹಾಕಬೇಕು.ರೋಸ್ಟರ್ ಪಾಲನೆ ಮೂಲಕ ಶುಲ್ಕವನ್ನು ನಿಗದಿಗೊಳಿಸಿ ಶಾಲೆಯ ನೋಟಿಸ್ ಬೋರ್ಡ್, ಬ್ಯಾನರ್ ನಲ್ಲಿ ಪ್ರಕಟಿಸಬೇಕು.ಈ ನಿಯಮವನ್ನು ಯಾವ ಶಾಲೆಗಳು ಸಹ ಪಾಲಿಸಿಲ್ಲ.ಈ ಕುರಿತು ಅನೇಕ ಬಾರಿ ಸಂಬಂಧಪಟ್ಟ ಬಿ. ಇ. ಒ ರವರಿಗೆ ಮನವಿ ಮಾಡಿದರು. ಕ್ರಮ ಜರುಗಿಸಲು ಮುಂದಾಗಿಲ್ಲ ಸರ್ಕಾರದ ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಲು ಬಿಇ ಓ ಪ್ರಕಟಿಸದೆ ಖಾಸಗಿ ಶಾಲೆಗಳ ಜೊತೆ ಹೊಂದಾಣಿಕೆ ಆಗಿದ್ದಾರೆ ಎಂಬ ಅನುಮಾನ ಬರುತ್ತದೆ. ಆದ್ದರಿಂದ ಕೂಡಲೇ ಶಾಲೆಗಳ ಮೇಲೆ ಕಾನೂನು ಕ್ರಮ ಜರುಗಿಸಿ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ರೇಗುಲೇಟಿಂಗ್ ಪ್ರಾಧಿಕಾರ ರಚಿಸಿ ಶಾಲೆಗಳ ಮೇಲೆ ಕ್ರಮ ಜರುಗಿಸಬೇಕು ಹಾಗೂ ಸಂಘಟನೆಯ ಮುಖಂಡರನ್ನು ಒಳಗೊಂಡಂತೆ ಜಂಟಿ ಸಭೆ ಸೇರಬೇಕು.
ಡೊನೇಶನ್ ಹಾವಳಿ ನಿಯಂತ್ರಣ ಮಾಡಬೇಕು. ಸರ್ಕಾರದ ನಿಯಮ ಗಾಳಿಗೆ ತೂರಿದ ಶಾಲೆಗಳ ಮಾನ್ಯತೆ ರದ್ದು ಮಾಡಿ. ಅನಧಿಕೃತವಾಗಿ ಶಾಲೆಗಳ ಮಾನ್ಯತೆ ಇಲ್ಲದೆ ಐಸಿಐಸಿ, ಸಿಬಿಎಸ್ಸಿ ನಡೆಸುವ ಶಾಲೆಗಳ ಮಾನ್ಯತೆ ರದ್ದುಗೊಳಿಸಬೇಕು. ಅಧಿಕೃತ ಶಾಲೆಗಳ ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ ಶಾಲೆಗಳ ಪಟ್ಟಿ ಬಿಡುಗಡೆ ಮಾಡಬೇಕೆಂದರು.
ಪ್ರತಿಭಟನೆಯಲ್ಲಿ ಎಸ್ ಎಫ್ ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ . ತಾಲೂಕ ಅಧ್ಯಕ್ಷ ಗ್ಯಾನೇಶ್ ಕಡಗದ ಮುಖಂಡರಾದ ನಾಗರಾಜು, ಮಂಜುನಾಥ್, ಬಸಯ್ಯ, ಪಂಪಾಪತಿ ವಕೀಲರು ಮತ್ತು ಬಸವರಾಜ್ ಇತರರು ಇದ್ದರು.