Advertisement

ಬಿಜೆಪಿ ಅಭ್ಯರ್ಥಿ ಮಂಜು ವಿರುದ್ಧ ಪೌರ ಕಾರ್ಮಿಕರ ಪ್ರತಿಭಟನೆ

12:58 PM Mar 27, 2019 | Lakshmi GovindaRaju |

ಹಾಸನ: ಮಾಜಿ ಸಚಿವ, ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ತಮ್ಮ ಚುನಾವಣಾ ರಾಜಕಾರಣದ ಲಾಭಕ್ಕಾಗಿ ಪೌರ ಕಾರ್ಮಿಕರ ಪಾದಪೂಜೆಯ ಗಿಮಕ್‌ ಮಾಡಿದ್ದಾರೆ ಎಂದು ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಹೇಮಾವತಿ ಪ್ರತಿಮೆಯ ಬಳಿ ಸಿಐಟಿಯು ನೇತೃತ್ವದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮುನಿಸಿಪಲ್‌ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಧರ್ಮೇಶ್‌ ಆವರು,

ಎ.ಮಂಜು ಅವರು ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುವ ಮೊದಲು ಪೌರ ಕಾರ್ಮಿಕ ಚಂದ್ರು – ಅಶ್ವಿ‌ನಿ ದಂಪತಿ ಪಾದ ಪೂಜೆ ಮಾಡಿದ್ದಾರೆ. ಮಂಜು ಅವರ ಈ ಗಿಮಿಕ್‌ ಈಗಾಗಲೇ ಸಮಾಜದಲ್ಲಿ ಅಪಮಾನಕ್ಕೊಳಗಾಗಿರುವ ಪೌರ ಕಾರ್ಮಿಕರನ್ನು ವ ಮೂಲಕ ಅವರನ್ನು ಮತ್ತಷ್ಟು ಅವಮಾನ ಮಾಡಿದಂತಾಗಿದೆ. ಇದು ಖಂಡನೀಯ ಎಂದರು.

ಪೌರ ಕಾರ್ಮಿಕರ ಹಿತ ಕಾಪಾಡಿಲ್ಲ: ಮಾಜಿ ಸಚಿವ ಎ. ಮಂಜು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅನುಸರಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ ತಾವು ಅಧಿಕಾರದಲ್ಲಿದ್ದಾಗ ಒಂದು ದಿನವಾದರೂ ಪೌರಕಾರ್ಮಿಕರ ಕಾಲೋನಿಗಳಿಗೆ ಹೋಗಲಿಲ್ಲ. ಅವರ ಕೆಲಸ ಕಾಯಂ ಮಾಡದೆ ಸುಪ್ರೀಂ ಕೋರ್ಟ್‌ ಆದೇಶದಂತೆ ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿ ಜಾರಿ ಮಾಡದೆ, ಅವರಿಗೆ ವಾಸ ಮಾಡಲು ಉತ್ತಮ ವಸತಿಗಳು ಮತ್ತು ಉತ್ತಮ ಬಡಾವಣೆಗಳನ್ನು ನಿರ್ಮಿಸದೆ,

ಅನಾರೋಗ್ಯ ಮತ್ತು ಅವಮಾನಗಳಿಂದ ಜೀವನ ಸಾಗಿಸುತ್ತಿರುವ ಪೌರಕಾರ್ಮಿಕರಿಗೆ ಸ್ವಾಭಿಮಾನಿ ಹಾಗೂ ಘನತೆಯ ಬದುಕು ಕಲ್ಪಿಸುವ ಬದಲು ರಾಜಕೀಯದ ಆಟಕ್ಕೆ ಪೌರಕಾರ್ಮಿಕರ ಪಾದಪೂಜೆ ಮಾಡಿ ಅವರು ನರಕದ ಕೂಪದಲ್ಲಿ ಬದುಕಿರಬೇಕೆನ್ನುವುದು ನರೇಂದ್ರ ಮೋದಿ, ಎ. ಮಂಜು, ಬಿಜೆಪಿ ಮತ್ತು ಸಂಘ ಪರಿವಾರದ ಉದ್ದೇಶವಾಗಿದೆ ಎಂದು ಕಿಡಿ ಕಾರಿದರು.

Advertisement

ಪೌರ ಕಾರ್ಮಿಕರ ಸಂಕಷ್ಟ: ನರೇಂದ್ರ ಮೋದಿ ಸರ್ಕಾರ “ಸ್ವಚ್ಛ ಭಾರತ ಅಭಿಯಾನ’ ಎಂಬ ಹೆಸರಿನಲ್ಲಿ ಸಾವಿರಾರು ಕೋಟಿ ಸಾರ್ವಜನಿಕ ಹಣವನ್ನು ಖರ್ಚು ಮಾಡಿದೆ. ನಾಗರಿಕರಿಂದ ಸ್ವಚ್ಛಭಾರತ ಸೆಸ್‌ ಕಟ್ಟಿಸಿಕೊಳ್ಳುತ್ತಿದೆ. ಆದರೆ ಶೌಚಾಲಯ, ಶೌಚಾಲಯದ ಗುಂಡಿಗಳು, ಮ್ಯಾನ್‌ಹೋಲ್‌ ಮತ್ತು ಒಳಚರಂಡಿಗಳನ್ನು ಸ್ವಚ್ಛಮಾಡಲು ಅತ್ಯಾಧುನಿಕ ಯಂತ್ರಗಳನ್ನು ಬಳಸದೆ ಇಂದಿಗೂ ಪೌರಕಾರ್ಮಿಕರ ಕೈಗಳಿಂದಲೇ ಸ್ವಚ್ಛಗೊಳಿಸಲಾಗುತ್ತಿದೆ.

ಅವರಿಗೆ ಸುರಕ್ಷತಾ ಪರಿಕರಗಳನ್ನು ನೀಡಿಲ್ಲ. ಅವರ ಕೆಲಸ ಕಾಯಂ ಮಾಡಿ ಅವರಿಗೆ ಒಂದು ನ್ಯಾಯಯುತ ವೇತನ ನೀಡಿಲ್ಲ. ಅವರಿಗೆ ವಾಸಯೋಗ್ಯ ವಸತಿಗಳನ್ನು ನಿರ್ಮಿಸಿಕೊಟ್ಟಿಲ್ಲ. ಹಾಗಾದರೆ ಸಾವಿರಾರು ಕೋಟಿ ಸ್ವಚ್ಛತಾ ಅಭಿಯಾನದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿ: ಮನುವಾದದ ಪ್ರತಿಪಾದಕರಾದ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಅನಸರಿಸಿ ಎ. ಮಂಜು ಅವರು ಅಸ್ಪೃಶ್ಯರಾಗಿರುವ ಪೌರಕಾರ್ಮಿಕರನ್ನು ಮತ್ತಷ್ಟು ಅವಮಾನಿಸಿದ್ದಾರೆ ಎ.ಮಂಜು ಮತ್ತು ಬಿಜೆಪಿ ಮೇಲೆ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಚುನಾವಣೆಯ ಆಟಗಳಿಗೆ ಪೌರಕಾರ್ಮಿಕರನ್ನು ಬಳಸಿಕೊಳ್ಳದಂತೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಬೇಕೆಂದೂ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೇರಿದ್ದ ಪೌಕಾರ್ಮಿಕರು ‘ನಿಮ್ಮ ಕಳಂಕಿತ ಕೈಗಳಿಂದ ನಮ್ಮ ಪಾದಪೂಜೆ ಮಾಡಬೇಡಿ; ನಮ್ಮ ಕೆಲಸ ಕಾಯಂ ಮಾಡಿ’ ಎಂದು ಘೋಷಣೆ ಕೂಗಿದರು. ಕೆಪಿಆರ್‌ಎಸ್‌ನ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ಕುಮಾರ್‌, ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್‌, ಎಸ್‌ಎಫ್ಐ‍ ಜಿಲ್ಲಾ ಜಂಟಿ ಕಾರ್ಯದರ್ಶಿ ವಿವೇಕ್‌, ಮುನಿಸಿಪಲ್‌ ಕಾರ್ಮಿರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ, ಜಿಲ್ಲಾ ಖಜಾಂಚಿ ಮಂಜುನಾಥ್‌ ಮತ್ತಿತರೆ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next