Advertisement

ಹಮ್‌ ಏಕ್‌ ಹೈ “ಅವಾಜ್‌’ಗೆ ಕಲಬುರಗಿ ಸ್ತಬ್ಧ

12:31 PM Dec 20, 2019 | Suhan S |

ಕಲಬುರಗಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಸತ್‌ನಲ್ಲಿ ಅನುಮೋದನೆ ದೊರೆತ ದಿನದಿಂದ ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಗಿರುವ ಕಲಬುರಗಿಯಲ್ಲಿ ಗುರುವಾರ ಮುಸ್ಲಿಮರು ಮೊಳಗಿಸಿದ “ಹಮ್‌ ಏಕ್‌ ಹೈ..ಅವಾಜ್‌ ಧೋ’ ಘೋಷಣೆಗೆ ಕೆಲ ಕಾಲ ಸಂಪೂರ್ಣ ಸ್ತಬ್ಧಗೊಂಡಿತ್ತು.

Advertisement

ಧರ್ಮ, ಜಾತಿ ಆಧಾರಿತ ಕಾಯ್ದೆಗಳ ಮೂಲಕ ಬಿಜೆಪಿ ಸರ್ಕಾರ ಜಾತ್ಯತೀತ ಭಾರತವನ್ನು ಹಿಂದುತ್ವ ರಾಷ್ಟ್ರವಾಗಿ ರೂಪಿಸಲು ಹೊರಟಿದೆ. ನಾಗರಿಕ ನೋಂದಣಿ ಕಾಯ್ದೆ, ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ದೇಶದ ಜನತೆಯಲ್ಲಿ ದ್ವೇಷ ಭಾವನೆ, ವಿಷ ಬೀಜ ಬಿತ್ತುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಸಾಂವಿಧಾನಿಕ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ಗುರುವಾರ ಸಾವಿರಾರು ಜನರು ನಗರೇಶ್ವರ ಶಾಲೆಯಿಂದ ಜಗತ್‌ ವೃತ್ತದ ವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಮೂಲೆ-ಮೂಲೆಗಳಿಂದ ಬಂದ ಜನರು ಒಗ್ಗೂಡಿ ರಸ್ತೆಗಿಳಿದು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶದ ಕಿಚ್ಚು ಪ್ರದರ್ಶಿಸಿದರು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾರನ್ನು ಹಿಟ್ಲರ್‌ಗೆ ಹೋಲಿಸಿದರು. ಕಪ್ಪು ಬಟ್ಟೆ ಧರಿಸಿ, ಕೈತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಬೃಹತ್‌ ಕಪ್ಪು ಬಾವುಟಗಳು, ಕಾಯ್ದೆಗಳ ವಿರೋಧಿ ಘೋಷಣೆಗಳ ಭಿತ್ತಿ ಫಲಕಗಳನ್ನು ಹಿಡಿದು ಹೋರಾಟ ನಡೆಸಿದರು.

ನಿಷೇಧಾಜ್ಞೆಗೆ ಸೆಡ್ಡು: ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆಗೆ ಸೆಡ್ಡು ಹೊಡೆದು ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಗರೇಶ್ವರ ಶಾಲೆ ಬಳಿ ಪ್ರತಿಭಟನೆಗೆ ಸಿದ್ಧರಾಗಿದ್ದ ಪೀಪಲ್ಸ್‌ ಪೋರಂ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರಿಂದ ಜನರು ಉದ್ರಿಕ್ತರಾದರು.

ನಿರೀಕ್ಷೆಗೂ ಮೀರಿ ಏಕಾಏಕಿ ತಂಡ-ತಂಡವಾಗಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ನಗರೇಶ್ವರ ಶಾಲೆಯಿಂದ ಮುಸ್ಲಿಂ ಚೌಕ್‌ ಮತ್ತು ಚೌಕ್‌ ವೃತ್ತದ ಕಡೆಗೆ ಬೃಹತ್‌ ಮೆರವಣಿಗೆಯಲ್ಲಿ ತೆರಳಿದರು. ಎರಡೂ ಕಡೆಗಳಲ್ಲೂ ದೊಡ್ಡ ಮಟ್ಟದ ಪ್ರತಿಭಟನಾ ಸಭೆಗಳನ್ನು ನಡೆಸಿದರು. ನಂತರ ಎರಡು ಕಡೆಗಳಿಂದ ಒಟ್ಟಾಗಿ ಜಗತ್‌ ವೃತ್ತಕ್ಕೆ ಆಗಮಿಸಿ, ಪ್ರತಿಭಟನೆಗೆ ಕುಳಿತರು.

Advertisement

ಬೃಹತ್‌ ಪ್ರತಿಭಟನೆ ಜಗತ್‌ ವೃತ್ತಕ್ಕೆ ಬಂದು ಸೇರುತ್ತಿದ್ದಂತೆ ಹಲವು ಕಡೆಗಳಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಒಂದೇ ಕಡೆ ಜಮಾವಣೆಯಾಗಿ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಕಡೆಗೆ ತೆರಳಲು ಪ್ರತಿಭಟನಾಕಾರರು ಯತ್ನಿಸಿದರು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಮೆಹಬೂಬ ನಗರ, ಟಿಪ್ಪು ಸುಲ್ತಾನ ಚೌಕ್‌ ಹಾಗೂ ಇತರ ಕಡೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಯತ್ನಿಸಿದವರನ್ನು ಪೊಲೀಸರು ಚದುರಿಸಿದರು.

ಮಹಿಳೆಯರ ಜಟಾಪಟಿ: ಕನ್ನಡ ಭವನದಿಂದ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಸಿಪಿಐಎಂ ಪಕ್ಷ ಮತ್ತು ಜನವಾದಿ ಮಹಿಳಾ ಸಂಘಟನೆ ನಾಯಕಿ ಕೆ. ನೀಲಾ ನೇತೃತ್ವದಲ್ಲಿ ಅಶ್ವಿ‌ನಿ ಮದನಕರ್‌, ಪವಿತ್ರಾ ವಸ್ತ್ರದ ಸೇರಿದಂತೆ ಹಲವಾರು ಮಹಿಳೆಯರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾನಿರತ ಮಹಿಳೆಯರನ್ನು ಪೊಲೀಸರು ತಡೆದು ನಿಲ್ಲಿಸಿದ್ದರಿಂದ ಜಟಾಪಟಿ ನಡೆಯಿತು.

ವಾಹನ ಸಂಚಾರ ಸಹಜ: ಪ್ರತಿಭಟನೆ ಮಾರ್ಗದಲ್ಲಿ ಮಾತ್ರ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳು ಬಂದ್‌ ಮಾಡಲಾಗಿತ್ತು. ನೆಹರು ಗಂಜ್‌, ಕಿರಾಣ ಬಜಾರ್‌, ಸೂಪರ್‌ ಮಾರ್ಕೆಟ್‌, ಮುಸ್ಲಿಂ ಚೌಕ್‌, ದರ್ಗಾ ಪ್ರದೇಶದಲ್ಲಿ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್‌ ಆಗಿದ್ದವು. ಬಸ್‌ ನಿಲ್ದಾಣ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಮತ್ತಿತರ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು ಆರಂಭವಾಗಿದ್ದವು. ನಗರೇಶ್ವರ ಶಾಲೆಯಿಂದ ಜಗತ್‌ ವೃತ್ತದ ವರೆಗೆ ಮೆರವಣಿಗೆ ಹೊರಟಿದ್ದರಿಂದ ಕೆಲ ಸಂಚಾರಕ್ಕೆ ತೊಂದರೆ ಉಂಟಾಯಿತು. ಉಳಿದಂತೆ ಎಲ್ಲೆಡೆ ವಾಹನ ಸಂಚಾರ ಸಹಜವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next