ಮಡಿಕೇರಿ: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಇದ್ದ ಮೀಸಲಾತಿಯ ಹಕ್ಕನ್ನು ದುರ್ಬಲಗೊಳಿಸಲು ಹೊರಟಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೀಸಲಾತಿ ಪ್ರತಿಪಾದನೆ ಕುರಿತು ಸರ್ಕಾರ ಮತ್ತೆ ಸುಪ್ರೀಂಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿ ಜನಪರ ತೀರ್ಪನ್ನು ಪಡೆಯಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ಕೇಂದ್ರ ಸರ್ಕಾರ ವಾದವನ್ನು ಸಮರ್ಥವಾಗಿ ಮಂಡಿಸದ ಕಾರಣ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಯುವ ಸಮೂಹ, ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಮೀಸಲಾತಿಯಿಂದ ವಂಚಿತರಾಗುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತೀರ್ಪಿನಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಪ್ರತಿಪಾದನೆ ಮೂಲಭೂತ ಹಕ್ಕು ಅಲ್ಲ ಎಂದು ತಿಳಿಸಿದೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮನೋಭಾವದಿಂದ ಗ್ರಾಮೀಣ ಯುವಜನತೆ ಹಾಗೂ ದುರ್ಬಲ ವರ್ಗ ತಮ್ಮ ಹಕ್ಕಿನಿಂದ ವಂಚಿತರಾಗಲಿದ್ದಾರೆ. ಸದಾ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿಯೇ ನಡೆದುಕೊಳ್ಳುವ ಕೇಂದ್ರ ಸರ್ಕಾರ ಇದೀಗ ಮೀಸಲಾತಿಯನ್ನು ಕಸಿದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ನ ಹಿರಿಯ ಮುಖಂಡರುಗಳಾದ ಮಿಟ್ಟುಚಂಗಪ್ಪ, ಟಿ.ಪಿ.ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಖಜಾಂಚಿ ಹೆಚ್.ಎಂ.ನಂದಕುಮಾರ್, ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾ‚ಕ್, ನಗರಸಭೆಯ ಮಾಜಿ ಸದಸ್ಯರುಗಳು, ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.