ಮಂಡ್ಯ: ಸಾರ್ವಜನಿಕ ರಸ್ತೆ ಅತಿಕ್ರಮಿಸಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ಜಾತಿನಿಂದನೆ ಪ್ರಕರಣ ದಾಖಲು ಮಾಡುವುದಾಗಿ ಬೆದರಿಕೆ ಹಾಕಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಾಲೂಕಿನ ಬೂತನಹೊಸೂರು ಗ್ರಾಮಸ್ಥರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ವಾಹನಗಳಲ್ಲಿ ಆಗಮಿಸಿದ ಗ್ರಾಮಸ್ಥರು, ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಕೆಲ ಸಮಯದವರೆಗೆ ಧರಣಿ ನಡೆಸಿದರು. ಆನಂತರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ತಾಲೂಕಿನ ಕಬ್ಬನಹಳ್ಳಿ ಗ್ರಾಮದ ಸರ್ಕಲ್ ಬಳಿ ಐವತ್ತು ವರ್ಷಗಳಿಂದ ಸಾರ್ವಜನಿಕರು ಬಳಸುತ್ತಿರುವ ರಸ್ತೆಯನ್ನು ಅಗೆದು, ಈ ಜಾಗದಲ್ಲಿ ಬೇಲಿ, ಕಾಂಪೌಂಡ್ ನಿರ್ಮಾಣಕ್ಕೆ ಅರುಣ ಎಂಬುವರು ಪ್ರಯತ್ನ ನಡೆಸಿದ್ದಾರೆ. ಕಬ್ಬನಹಳ್ಳಿ ಸರ್ಕಲ್ ಬಳಿ ಇರುವ ಸರ್ವೆ ನಂಬರ್ ಬಾಜುವಿನಲ್ಲಿ ಹಾದು ಹೋಗುವ ಈ ಸಾರ್ವಜನಿಕ ರಸ್ತೆ ಜಾಗವನ್ನು ಇತ್ತೀಚೆಗೆ ತಾವು ಖರೀದಿಸಿರುವುದಾಗಿ ಹೇಳಿ ರಸ್ತೆ ಜಾಗ ತಮಗೆ ಸೇರಿದ್ದೆಂದು ಅತಿಕ್ರಮ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಗ್ರಾಮಸ್ಥರು ಪ್ರಶ್ನಿಸಿ ರಸ್ತೆಯನ್ನು ವಿರೂಪಗೊಳಿಸುವುದು ಬೇಡ ಎಂದು ಮನವಿ ಮಾಡಿದ್ದೆವು. ಯಾವುದೇ ಕಟ್ಟಡ ವಗೈರೆ ನಿರ್ಮಾಣ ಮಾಡಿದರೆ ತಿರುಗಾಡಲು ಮತ್ತು ದಿನನಿತ್ಯದ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರೂ ಅವರು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ದೂರಿದರು.
ಬೆದರಿಕೆ: ಸುದ್ದಿ ತಿಳಿದು ಸ್ಥಳಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಅರುಣ್ ಇತರರಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ. ಆದರೆ ಅವರ ಮನವಿಗೂ ಕಿವಿಗೊಡದೆ ಪದೇಪದೆ ಬೇಲಿ ಹಾಕುವ ಪ್ರಯತ್ನ ಮುಂದುವರಿಸಿದ್ದಾರೆ. ಅಲ್ಲದೆ, ಜಾತಿ ನಿಂದನೆ ಕೇಸ್ ಹಾಕಿಸಿ ಒಳಗೆ ಹಾಕಿಸುತ್ತೇನೆ ಎಂದು ಧಮಕಿ ಹಾಕುತ್ತಿದ್ದಾರೆ. ಸದ್ಯದಲ್ಲೇ ರಸ್ತೆಯನ್ನು ಮುಚ್ಚದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಕಿಡಿಕಾರಿದರು.
ಗ್ರಾಮದ ಮುಖಂಡರಾದ ಎನ್.ಎಸ್. ಗಾಯಿತ್ರಿ, ಸವಿತಾ, ದೇವೇಗೌಡ, ಶಿಲ್ಪಾ, ಸಣ್ಣೇಗೌಡ, ಚಿಕ್ಕನಾಗಪ್ಪ, ಸುನಿಲ್‌ಕುಮಾರ್, ಮಂಜುಳ, ವಿನೋದ, ಅಭಿಷೇಕ ಸರೋಜಮ್ಮ, ರಾಮು, ಕವನ, ಮಹದೇವ, ಸುನೀತಾ, ಪ್ರಮೀಳ, ಶಂಕರ, ನೀತಿನ್, ಪ್ರದೀಪ, ಮಂಗಳ, ರಚನಾ, ಸ್ವಾಮಿ, ಶ್ವೇತಾ, ನಿಂಗರಾಜು, ಶೃತಿ, ರಘು, ಪ್ರಭ, ರಾಜು, ಜಯರಾಮು, ಸಿದ್ದರಾಜು, ಮಂಜುನಾಥ, ವೀಣಾ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಾಂತಿ ಭಂಗ ಬೇಡ : ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಗಳಿದ್ದು, ಈ ಪ್ರಕರಣವು ಜಾತಿ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ. ಇದರಿಂದ ಸಾಮಾಜಿಕ ಶಾಂತಿಗೂ ಭಂಗ ಉಂಟಾಗಿ ಜನ-ಜೀವನಕ್ಕೆ ತೊಂದರೆಯಾಗಬಹುದು. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು, ಸಾರ್ವಜನಿಕ ರಸ್ತೆಯನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.