ಗಜೇಂದ್ರಗಡ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಬಿ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾಯ್ದೆ ವಿರೋಧಿ ಸಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಮುಸ್ಲಿಂ ಸಮುದಾಯದವರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತವನ್ನು ಇಬ್ಭಾಗ ಮಾಡಿ, ಜಾತಿ-ಜಾತಿಗಳ ಮಧ್ಯೆ ಕೋಮುವಾದ ಸೃಷ್ಟಿಸುವ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದೆ. ದೇಶದ ಆರ್ಥಿಕತೆ ದಿವಾಳಿಯಾಗಿದ್ದು, ಕೋಟ್ಯಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಅದರ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಮೋದಿ ಸರ್ಕಾರ ದೇಶ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರು ರೊಚ್ಚಿಗೇಳುವ ಕಾಲ ಸನ್ನಿಹಿತ: ಬ್ರಿಟಿಷರಿಂದ ಭಾರತಕ್ಕೆ ದೊರಕಬೇಕಾದ ಸ್ವಾತಂತ್ರ್ಯ ಪಡೆಯುಲು ಅಂದು ದೇಶದ ಜನ ಬೀದಿಗಿಳಿದು ಹೋರಾಟ ಮಾಡಿದ್ದರು. ಅದೇ ರೀತಿ ಕೇಂದ್ರ ಸರ್ಕಾರ ಹೊಡೆದೋಡಿಸಲು ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಪ್ರತಿಭಟನೆಗೆ ದೇಶವ್ಯಾಪಿ ಜನರು ಮುಂದಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದ್ದು, ಬಿಜೆಪಿ ಸರ್ಕಾರ ಕಿತ್ತೂಗೆಯಲು ಜನರು ರೊಚ್ಚಿಗೇಳುವ ಕಾಲ ಸನ್ನಿಹಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಯ್ದೆ ಹಿಂಪಡೆಯಲು ಒತ್ತಾಯ: ದೇಶದ ಉದ್ದಗಲಕ್ಕೂ ನಡೆಯುತ್ತಿರುವ ಹೋರಾಟವನ್ನು ಅಧಿಕಾರ ಬಳಸಿಕೊಂಡು ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ. ಪದೇ, ಪದೇ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿಕೊಂಡು, ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತಿ, ರಾಜಕಾರಣ ಮಾಡುವುದು ಬಿಜೆಪಿಯ ವಿನಾಶಕ್ಕೆ ಕಾರಣವಾಗಲಿದೆ. ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತು ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಒತ್ತಾಯಿಸಿದರು. ನಂತರ ತಹಶೀಲ್ದಾರ್ ಕಚೇರಿಯ ಶಿರಸೇ¤ದಾರ ಎ.ಎಫ್. ಪಾಟೀಲ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮೌಲಾನಾ ನೂರಾನಿ, ಮೌಲಾನ ರಫೀಕ್ ಅಶ್ರಫ್, ಅಂಜುಮನ್ ಇಸ್ಲಾಂ ಕಮಿಟಿ ವೈಸ್ ಚೇರಮನ್ ಎಂ.ಎಚ್. ಜಾಲಿಹಾಳ, ಕಾರ್ಯದರ್ಶಿ ಮಾಸುಮಲಿ ಮದಗಾರ, , ರಾಜು ಸಾಂಗ್ಲಿಕಾರ, ಮುರ್ತುಜಾ ಡಾಲಾಯತ್, ಹಸನ ತಟಗಾರ, ದಾದು ಹಣಗಿ, ಫಕ್ರುಸಾಬ ಕಾತರಕಿ, ಎಂ.ಬಿ. ಒಂಟಿ, ಎಂ.ಎಚ್ ಕೋಲಕಾರ, ಫಯಾಜ ತೋಟದ, ಯಾಸೀನ ಮಾರನಬಸರಿ, ಇಸ್ಮಾಯಿಲಸಾಬ ನಾಲಬಂದ ಇತರರು ಇದ್ದರು.