ಜೇವರ್ಗಿ: ಪೌರತ್ವ ಕಾಯ್ದೆ ವಿರುದ್ಧ ಪಟ್ಟಣದಲ್ಲಿ ಸೋಮವಾರ ವಿವಿಧ ರಾಜಕೀಯ, ದಲಿತಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಜಮಾಯಿಸಿದ ಸಾವಿರಾರು ಜನ ಬಸವೇಶ್ವರ ಸರ್ಕಲ್ ವರೆಗೆ ಮೆರವಣಿಗೆ ನಡೆಸಿದರು. ಇದೇ ವೇಳೆ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಮೆರವಣಿಗೆಗೆ ಅವಕಾಶ ನೀಡಲಿಲ್ಲ. ಸತತ ಎರಡು ಗಂಟೆಗೂ ಅಧಿಕ ಬಸವೇಶ್ವರ ಸರ್ಕಲ್ ಬಳಿ ಧರಣಿ ಕುಳಿತ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಮಿನಿ ವಿಧಾನಸೌಧ ಕಚೇರಿ ವರೆಗೆ ಮೆರವಣಿಗೆಗೆ ಅವಕಾಶ ನೀಡಲಾಯಿತು.
ಜೇವರ್ಗಿ ಪೀಪಲ್ಸ್ ಫೋರಂ ಕಮಿಟಿ, ಕಮ್ಯುನಿಸ್ಟ್, ಕಾಂಗ್ರೆಸ್, ಜೆಡಿಎಸ್, ಎಸ್ ಡಿಪಿಐ, ರೈತ ಸಂಘ, ದಲಿತ ಸಮನ್ವಯ ಸಮಿತಿ ಸೇರಿದಂತೆ ಹಲವಾರು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು. ಇದೇ ವೇಳೆ ಶಾಸಕ ಡಾ| ಅಜಯಸಿಂಗ್ ಮಾತನಾಡಿ, ಸಂಸತ್ತಿನ ಎರಡೂ ಸದನಗಳಲ್ಲಿ ಬಿಜೆಪಿ ಸದಸ್ಯರು ಸಂವಿಧಾನದ ಮೂಲ ಆಶಯಗಳನ್ನು ಬುಡಮೇಲು ಮಾಡುವಂತಹ ಕಾನೂನಿನ ಪರ ಮತ ಚಲಾಯಿಸಿದೆ ಎಂದು ಆರೋಪಿಸಿದರು.
ಸಂವಿಧಾನ ವಿರೋಧಿಗಳನ್ನು ಸಂಸದರನ್ನಾಗಿ ಆಯ್ಕೆ ಮಾಡಿದ ಬಿಜೆಪಿ ಹಾಗೂ ಎನ್‌ಡಿಎ ಒಕ್ಕೂಟವು ಮೂಲತಃ ಸಂವಿಧಾನ ವಿರೋಧಿಯಾಗಿದೆ ಎಂದು ಸಿಎಎ ಮೂಲಕ ಸಾಬೀತುಪಡಿಸಿದೆ. ಪೌರತ್ವ ತಿದ್ದುಪಡಿಯಿಂದ ಭಾರತೀಯ ಸಂವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ. ಈ ಕಾಯ್ದೆ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಅಪಾಯಕಾರಿಯಾಗಿದೆ ಎಂದರು.
ಎನ್‌ಆರ್‌ಸಿಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ, ಅಮೀತ್ ಶಾ ಸರ್ಕಾರ ಸಾರಿರುವುದು ಗಣತಂತ್ರದ ಸ್ವರೂಪವನ್ನೇ ಬದಲಿಸುವ ದುರುದ್ದೇಶ ಹೊಂದಿದೆ. ಸಂವಿಧಾನ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ರಾಜ್ಯದ ಇಬ್ಬರು ಯುವಕರು ಸೇರಿದಂತೆ 60ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅವರ ಈ ಬಲಿದಾನ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಕೂಡಲೇ ಕೇಂದ್ರ ಸರ್ಕಾರ ತನ್ನ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕೈಬಿಡಬೇಕೆಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಸಿಪಿಐನ ಮಹೇಶ ರಾಠೊಡ, ಶೌಕತ್ ಅಲಿ ಆಲೂರ, ಶಂಕರ ಕಟ್ಟಿಸಂಗಾವಿ, ಮಲ್ಲಿಕಾರ್ಜುನ ದಿನ್ನಿ ಮತ್ತಿತರ ಮುಖಂಡರು ಮಾತನಾಡಿದರು. ಮುಖಂಡರಾದ ಅಲ್ಲಾಭಕ್ಷ ಬಾಗವಾನ್, ಅಬ್ದುಲ್ ರಹೇಮಾನ್ ಪಟೇಲ್, ಅಮೀರ ಹಮ್ಜಾ, ರುಕುಂ ಪಟೇಲ್, ಬಾಷಾ ಪಟೇಲ್, ಕಾಶಿಂ ಪಟೇಲ್ ಮುದಬಾಳ, ಮಹಿಮೂದ್ ನೂರಿ, ಅಬ್ದುಲ್ ರಜಾಕ ಮನಿಯಾರ್, ಉಸ್ಮಾನ ಸಿಪಾಯಿ, ಮಹಿಮೂಬ ಮನಿಯಾರ, ಬಶೀರ್ ಇನಾಮದಾರ, ದಲಿತ ಮುಖಂಡರಾದ ಮಲ್ಲಣ್ಣ ಕೊಡಚಿ, ರವಿ ಕುರಳಗೇರಾ, ಶ್ರೀಹರಿ ಕರಕಿಹಳ್ಳಿ, ಶ್ರೀಮಂತ ಧನ್ನಕರ್, ಜೆಡಿಎಸ್ ಮುಖಂಡರಾದ ಚಂದ್ರಶೇಖರ ಮಲ್ಲಾಬಾದ, ಸಿದ್ದು ಮಾವನೂರ, ರೈತ ಸಂಘದ ಅದ್ಯಕ್ಷ ಸುಭಾಷ ಹೊಸಮನಿ, ವೆಂಕೋಬರಾವ್ ವಾಗಣಗೇರಾ ಮತ್ತಿತರರು ಇದ್ದರು.