Advertisement

ಬಿಎಸ್ಸೆನ್ನೆಲ್‌ ವಿರುದ್ಧ ಪ್ರತಿಭಟನೆ

12:12 PM Jul 10, 2018 | Team Udayavani |

ಮಹಾನಗರ : ಬಿಎಸ್ಸೆನ್ನೆಲ್‌ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 90ಕ್ಕೂ ಮಿಕ್ಕಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಬಿಎಸ್ಸೆನ್ನೆಲ್‌ ನಾನ್‌ ಪರ್ಮನೆಂಟ್‌ ವರ್ಕರ್ಸ್‌ ಯೂನಿಯನ್‌ ಸಿಐಟಿಯು ವತಿಯಿಂದ ಬಿಎಸ್ಸೆನ್ನೆಲ್‌ ಪ್ರಧಾನ ಕಚೇರಿ ಮುಂಭಾಗ ಸೋಮವಾರ ಬೃಹತ್‌ ಪ್ರತಿಭಟನ ಪ್ರದರ್ಶನ ನಡೆಯಿತು.

Advertisement

ತಾತ್ಕಾಲಿಕ ಸ್ವರೂಪದ ಕೆಲಸ ಹೆಚ್ಚಳ
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಸಂತ ಆಚಾರಿ, ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್‌ ಸಂಸ್ಥೆಗೆ ಉತ್ತಮ ಹೆಸರಿದ್ದು, ಇದಕ್ಕೆ ಗುತ್ತಿಗೆ ಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿ ಮತ್ತು ನಗರ ಪ್ರದೇಶದಲ್ಲಿರುವ ಎಕ್ಸ್‌ಚೇಂಜ್‌ಗಳಲ್ಲಿ ಉತ್ತಮ ಸೇವೆ ನಿರ್ವಹಿಸಿರುವುದೇ ಕಾರಣ. ಕೇಂದ್ರ ಸರಕಾರದ ನವ ಉದಾರೀಕರಣ ನೀತಿಯನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುವ ಭಾಗವಾಗಿ ದೇಶದ ಉದ್ದಗಲಕ್ಕೂ ಖಾಯಂ ಸ್ವರೂಪದ ಕೆಲಸಗಳು ನಾಶವಾಗಿ ತಾತ್ಕಾಲಿಕ ಸ್ವರೂಪದ ಕೆಲಸಗಳು ಹೆಚ್ಚುತ್ತಿವೆ. ಈ ಕೆಲಸಗಳಲ್ಲಿ ಗುತ್ತಿಗೆ ಕಾರ್ಮಿಕರು ಬಹುಪಾಲು ಮಂದಿ ದುಡಿಯುತ್ತಿದ್ದು, ಅವರ ಮೇಲೆ ಅಮಾನವೀಯ ಶೋಷಣೆಗಳು ನಡೆಯುತ್ತಿವೆ ಎಂದು ಆಪಾದಿಸಿದರು.

ಉಪಯೋಗಿಸಿ ಎಸೆಯುವ ನೀತಿಯಿಂದಾಗಿ ಕಾರ್ಮಿಕರು ನಿರ್ಗತಿಕರಾಗುತ್ತಿದ್ದಾರೆ. ಸರಕಾರದ ನೀತಿಗಳು ಮತ್ತು ಆಡಳಿತ ವರ್ಗದ ನೀತಿಗಳು ಅಮಾನವೀಯವಾಗಿದೆ. ಎಲ್ಲ ಕೆಲಸಗಳನ್ನು ಕಳೆದುಕೊಂಡ ಕಾರ್ಮಿಕರನ್ನು ಪುನರ್‌ ನೇಮಕ ಮಾಡಬೇಕು. ಅನಿವಾರ್ಯವಾಗಿ ಕೆಲಸದಿಂದ ಕೈ ಬಿಡಬೇಕಾದ ಪರಿಸ್ಥಿತಿ ಬಂದಾಗ ಅವರಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು. 

ತೀವ್ರ ಹೋರಾಟದ ಎಚ್ಚರಿಕೆ
ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಚೀಟಿ, ವೇತನ ಚೀಟಿ, ವಾರದಲ್ಲಿ ಒಂದು ದಿನ ರಜೆ, ಹಬ್ಬದ ರಜೆ, ಹೆಚ್ಚುವರಿ ದುಡಿಮೆಗೆ ಹೆಚ್ಚುವರಿ ವೇತನ ನೀಡಲು ಸಾಧ್ಯವಾಗದ ಗುತ್ತಿಗೆದಾರರನ್ನು ನಿಯಂತ್ರಿಸಲು ವಿಫಲವಾದ ಪ್ರಧಾನ ಆಡಳಿತ ವರ್ಗದ ನೀತಿ ಖಂಡನೀಯ. ಬೇಡಿಕೆಗಳನ್ನು ಈಡೇರಿಸದಿದ್ದರೆ ತೀವ್ರತರದ ಹೋರಾಟವನ್ನು ಸಂಘಟಿಸಲಾಗುವುದೆಂದು ಎಂದರು.

ಉನ್ನತ ಮಟ್ಟದ ನಿಯೋಗವು ಬಿಎಸೆನ್ನೆಲ್‌ ಜನರಲ್‌ ಮ್ಯಾನೇಜರ್‌ರವರಿಗೆ ಮನವಿ ನೀಡಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಅನಂತರ ಇದೇ ಬೇಡಿಕೆಗಳನ್ನು ಕೇಂದ್ರ ಸಹಾಯಕ ಕಾರ್ಮಿಕ ಆಯುಕ್ತರಿಗೆ ನೀಡಿ ಸರಕಾರದ ಮಧ್ಯ ಪ್ರವೇಶಕ್ಕಾಗಿ ಒತ್ತಾಯಿಸಲಾಯಿತು. ಜಿಲ್ಲಾ ಪ್ರ.ಕಾರ್ಯದರ್ಶಿ ಉದಯ್‌ ಕುಮಾರ್‌, ಉಡುಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಮೋಹನ್‌, ಮುಖಂಡರಾದ ದಿನೇಶ್‌, ಸುನಿಲ್‌, ಅನಿಫ್‌, ನಿತ್ಯಾನಂದ, ಶಿವಪ್ರಕಾಶ್‌, ರಮೇಶ್‌, ಶೀನಪ್ಪ ಮತ್ತಿತರರು ಉಪಸ್ಥಿತರಿದ್ದರು. 

Advertisement

ಸೆ. 5: ಪಾರ್ಲಿಮೆಂಟ್‌ ಚಲೋ ಕಾರ್ಯಕ್ರಮ
ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ದೇಶ ವ್ಯಾಪಿಯಾಗಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ತೀವ್ರ ಹೋರಾಟ ಆರಂಭವಾಗಿದೆ. ಕೆಲಸದ ಭದ್ರತೆಯನ್ನು ನೀಡದಂತೆ ಕಾರ್ಪೊರೇಟ್‌ ರಂಗಕ್ಕೆ ಸಹಕರಿಸುವ ಈ ನೀತಿಯ ವಿರುದ್ಧವಾಗಿ ಸಿಐಟಿಯು ಸೆ. 5ರಂದು ಪಾರ್ಲಿಮೆಂಟ್‌ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಪೂರ್ವಭಾವಿಯಾಗಿ ರಾಜ್ಯವ್ಯಾಪಿ ಹೋರಾಟ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next