ಚಿಕ್ಕಬಳ್ಳಾಪುರ: ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವಹೇಳನೆ ಮಾಡಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಶಿಡ್ಲಘಟ್ಟ ನಗರದಲ್ಲಿ ಪ್ರತಿಭಟನೆ ನಡೆಸಿ ಕೃಷಿ ಸಚಿವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿ ಶಿಡ್ಲಘಟ್ಟ ನಗರದ ಸಾರಿಗೆ ಸಂಸ್ಥೆಯ ಬಿಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು ಕೂಡಲೇ ಕೃಷಿ ಸಚಿವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘ ಹಾಗೂ ಹಸಿರುಸೇನೆ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ರಾಜ್ಯದ 30 ಜಿಲ್ಲೆಯಲ್ಲಿ ಯೂರಿಯಾ ಅಭಾವವಿದೆ ಯೂರಿಯಾ ಮತ್ತು ಬಿತ್ತನೆ ಬೀಜದ ಸಮಸ್ಯೆಯನ್ನು ಬಗೆಹರಿಸದ ಕೃಷಿ ಮಂತ್ರಿ ರಾಜ್ಯಕ್ಕೆ ಬೇಕಾ ಎಂದು ಪ್ರಶ್ನಿಸಿದ ಅವರು ಗ್ರಾಮೀಣ ಭಾಗದ 3200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಮಾಡಿದ ಕೃಷಿ ಸಚಿವರ ಕಾರ್ಯವೈಖರಿಯನ್ನು ಪ್ರಶ್ನಿಸಿದ ರೈತ ಸಂಘದ ರಾಜ್ಯಾಧ್ಯಕ್ಷರ ಅವಹೇಳನೆ ಮಾಡಿ ರೈತರಿಗೆ ಅವಮಾನಗೊಳಿಸಿರುವ ಕೃಷಿ ಸಚಿವರು ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು ಇಲ್ಲದಿದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್.ಶಿಡ್ಲಘಟ್ಟ ತಾಲೂಕು ಆದ್ಯಕ್ಷ ತಾದೂರು ಮಂಜುನಾಥ್, ಉಪಾದ್ಯಕ್ಷ ಮುನಿನಂಜಪ್ಪ, ಬೀರಪ್ಪ,ಜಿಲ್ಲಾ ಸಂಚಾಲಕ ಕಿಶೋರ್,ರಾಮಕೃಷ್ಣಪ್ಪ,ಹಸಿರು ಸೇನೆಯ ತಾಲೂಕು ಸಂಚಾಲಕ ರವಿ, ಖಜಾಂಚಿ ರಮೇಶ್, ಉಪಾಧ್ಯಕ್ಷ ಅಶ್ವಥ್, ಅಮರೇಶ್,ನಗರ ಘಟಕದ ಸಂಘಟನಾ ಕಾರ್ಯದರ್ಶಿ ಏಜಾಝ್, ಖಜಾಂಚಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.