ಗದಗ: ಕನ್ನಡಪರ ಸಂಘಟನೆಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೀಡಿರುವ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಘೋಷಣೆ ಕೂಗಿದರು. ಯತ್ನಾಳ ಪ್ರತಿಕೃತಿ ದಹನಕ್ಕೆ ಅಡ್ಡಿಪಡಿಸಿದ ಪೊಲೀಸರೊಂದಿಗೆ ಹೋರಾಟಗಾರರು ವಾಗ್ವಾದ ನಡೆಸಿದರು.
ಮರಾಠಿಗರ ಮತಗಳನ್ನು ಸೆಳೆಯುವ ಉದ್ದೇಶದಿಂದ ಇತ್ತೀಚೆಗೆ ಬಿಜೆಪಿ ಸರಕಾರ ಮರಾಠ ಭಾಷಿಗರ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಆದರೆ ದಶಕಗಳಿಂದ ಕನ್ನಡ ನಾಡು, ನುಡಿಗಾಗಿ ಕರವೇ ನಡೆಸುತ್ತಿರುವ ಪ್ರಾಮಾಣಿಕ ಹೋರಾಟ ಫಲವಾಗಿ ಇಂದಿಗೂ ಬೆಳಗಾವಿ ರಾಜ್ಯದಲ್ಲಿ ಉಳಿದಿದೆ. ಅದರಂತೆ ಗಡಿ ಜಿಲ್ಲೆಗಳಾದ ರಾಯಚೂರು, ಬೀದರ್, ಚಿಕ್ಕಬಳ್ಳಾಪುರ ಜಿಲ್ಕೆಗಳಲ್ಲಿ ಕನ್ನಡಿಗರ ಧ್ವನಿಯಾಗಿ ಕರವೇ ಹೋರಾಟ ನಡೆಸುತ್ತಿವೆ. ಆದರೆ ಶಾಸಕ ಯತ್ನಾಳ ಅವರು ಕನ್ನಡಪರ ಸಂಘಟನೆಗಳು ಡೋಂಗಿ ಎಂಬ ಹೇಳಿಕೆ ನೀಡಿ, ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಪರ ಸಂಘಟನೆಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಯತ್ನಾಳ ತಕ್ಷಣ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್.ಸೋಂಪುರ, ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.