ಬೆಂಗಳೂರು: ರೈತರ ಕೃಷಿ ಸಾಲಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದರೂ ಸಾಲ ವಸೂಲಾತಿಗೆ ರೈತರಿಗೆ
ಕಿರುಕುಳ ಕೊಡುತ್ತಿರುವ ಎಕ್ಸಿಸ್ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕರವೇ ಕಾರ್ಯಕರ್ತರು ರಾಜ್ಯಾದ್ಯಂತ ಸೋಮವಾರ ಪ್ರತಿಭಟನೆ ನಡೆಸಿದರು.
ಹಲವೆಡೆ ಬ್ಯಾಂಕ್‌ಗೆ ಮುತ್ತಿಗೆ ಹಾಕಲು ಯತ್ನಿಸಿ, ಆಕ್ರೋಶ ವ್ಯಕ್ತಪಡಿಸಿದರು.ಮೈಸೂರಿನಲ್ಲಿ ವಿವಿ ಮೊಹಲ್ಲಾದಲ್ಲಿರುವ
ಎಕ್ಸಿಸ್ ಬ್ಯಾಂಕ್ ಮುಂದೆ ಜಮಾಯಿಸಿದ ರೈತರು, ಬ್ಯಾಂಕಿಗೆ ಮುತ್ತಿಗೆ ಹಾಕಿ, ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ರಾಜ್ಯದಲ್ಲಿ ನಿರಂತರವಾಗಿ 5 ವರ್ಷ ಬರಗಾಲವಿದ್ದರೂ ಸಾಲ ವಸೂಲಾತಿಗಾಗಿ ರೈತರಿಗೆ ಕಿರುಕುಳ ಕೊಡುತ್ತಿರುವ ಎಲ್ಲಾ ಬ್ಯಾಂಕುಗಳ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಕ್ರಮ ಜರುಗಿಸಬೇಕು. ರೈತರಿಗೆ ಬಂಧನ ವಾರೆಂಟ್ ಹೊರಡಿಸಿರುವ ಎಕ್ಸಿಸ್ ಬ್ಯಾಂಕ್‌ನ್ನು ರಾಜ್ಯದಿಂದ ಖಾಲಿ ಮಾಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಎಕ್ಸಿಸ್ ಬ್ಯಾಂಕಿನ ವ್ಯವಸ್ಥಾಪಕ ಎಸ್.ಗುರುರಾಜ್, ಇನ್ನು ಮುಂದೆ ನಾವು ಯಾವುದೇ ರೈತರಿಗೆ ನೋಟಿಸ್ ಜಾರಿ ಮಾಡುವುದಾಗಲಿ, ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಲಿ ಮಾಡುವುದಿಲ್ಲ. ಬದಲಿಗೆ ಸರ್ಕಾರದ ನಿಯಮಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.ಇದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು, ಮುಂದಿನ ದಿನಗಳಲ್ಲಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು.
ಮಂಡ್ಯದಲ್ಲಿ ವಿವೇಕಾನಂದ ಜೋಡಿ ರಸ್ತೆಯ ಮಾಕಂ ಟವರ್ನಲ್ಲಿರುವ ಎಕ್ಸಿಸ್ ಬ್ಯಾಂಕ್‌ನ ಶಾಖಾ ಕಚೇರಿಗೆ ಮುತ್ತಿಗೆ ಹಾಕಿದ ರೈತರು,ಬ್ಯಾಂಕ್ ಮತ್ತು ಸರ್ಕಾರದ ವಿರುದಟಛಿ ಘೋಷಣೆ ಕೂಗಿದರು. ಹಾಸನದಲ್ಲಿ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಿ.ಎಂ.ರಸ್ತೆಯಲ್ಲಿರುವ ಎಕ್ಸಿಸ್ ಬ್ಯಾಂಕ್ ಎದುರು ಧರಣಿ ನಡೆಸಿದರು.
ಮುಳಬಾಗಿಲಿನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ಮಿನಿ ವಿಧಾನಸೌದ ಎದುರು ಪ್ರತಿಭಟನೆ
ನಡೆಯಿತು. ಇದೇ ವೇಳೆ, ಬೆಳಗಾವಿ, ಹುಬ್ಬಳ್ಳಿ, ಯಾದಗಿರಿ, ರಾಯಚೂರು, ಶಿವಮೊಗ್ಗ, ದೊಡ್ಡಬಳ್ಳಾಪುರ, ರಾಮನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.