ಬಳ್ಳಾರಿ: ಬರಗಾಲದ ನೆಪವೊಡ್ಡಿ ಅಂತಾರಾಷ್ಟ್ರೀಯ ಮನ್ನಣೆಗಳಿಸಿದ್ದ ಹಂಪಿ ಉತ್ಸವ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲೆಯ ಕಲಾವಿದರು ಕಸಾಪ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿಶ್ವ ಪ್ರಸಿದ್ಧ ಹಂಪಿ ಉತ್ಸವ ಬರಗಾಲದಿಂದ ರದ್ದು ಮಾಡಿ, ಬೇರೆ ಉತ್ಸವಗಳನ್ನು ಮಾಡುವುದು ಸರಿಯಲ್ಲ. ಉತ್ಸವಕ್ಕಾಗಿ ನಾವು ಸಂಘಟಿತರಾಗಿ ಹೋರಾಡುತೇ¤ವೆ. ಸರಳವಾಗಿಯಾದರೂ ಉತ್ಸವ ಆಚರಣೆ ಮಾಡಲೇಬೇಕು. ಶಾಸಕರು, ಜನಪ್ರತಿನಿ ಧಿಗಳು ಇದರ ಬಗ್ಗೆ ಮಾತನಾಡದಿರುವುದು ಖೇದಕರ. ಇನ್ನಾದರೂ ಮಾತನಾಡಿ ಹಂಪಿ ಉತ್ಸವ ನಡೆಸಲು ಮುಂದಾಗಬೇಕು. ಇದಕ್ಕೆ ಜನಪ್ರತಿನಿಧಿ ಗಳ ಹಿತಾಸಕ್ತಿ ಮುಖ್ಯ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಉತ್ಸವ ರದ್ದು ಮಾಡಿರುವುದು ಹಂಪಿಯ ಸಾಂಸ್ಕೃತಿಕ ಪರಂಪರೆಗೆ ಮಾಡಿರುವ ಅವಮಾನವಾಗಿದೆ. ಇದರಿಂದ ಕಲಾವಿದರು, ಸಾಹಿತಿಗಳು, ಅಭಿಮಾನಿಗಳಿಗೆ ಬೇಸರವಾಗಿದೆ. ಪರಂಪರೆಯಿಂದ ನಡೆದುಕೊಂಡು ಬಂದಿರುವ ಉತ್ಸವ ನಿಲ್ಲಿಸಬಾರದು. ಕಲಾವಿದರಿಗೆ ಸಂಭಾವನೆ ಕೊಡದಿದ್ದರೂ ಕಾರ್ಯಕ್ರಮ ನೀಡುತ್ತೇವೆ ಎಂದರು.
ಹಂಪಿ ಉತ್ಸವದ ರೂವಾರಿಗಳಾಗಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶರ ಕನಸಿನ ಕೂಸನ್ನು ಉಳಿಸಬೇಕಾಗಿದೆ. ಉತ್ಸವ ಮಾಡದಿದ್ದರೆ ಕಲಾವಿದರೆಲ್ಲರೂ ಸೇರಿ ಮುಂದೆ ಹೊಸಪೇಟೆಯಿಂದ ಹಂಪಿಗೆ ಕಾಲ್ನಡಿಗೆ ಮೂಲಕ ತೆರಳಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವಿಶ್ವದ ಅತಿ ದೊಡ್ಡ ಬಯಲು ಸಂಗ್ರಹಾಲಯದ ಹಂಪಿ ಉತ್ಸವ ಇದುವರೆಗೆ 5 ಬಾರಿ ರದ್ದು ಮಾಡಿದ್ದಾರೆ. ಈಗ ಉತ್ಸವ ಮಾಡದಿದ್ದರೆ ಕಲಾವಿದರಿಗೆ ಅನ್ಯಾಯ ಮಾಡಿದಂತೆ. ಆದ್ದರಿಂದ ಕಲಾವಿದರನ್ನು ಗೌರವಿಸಿ ಹಂಪಿ ಉತ್ಸವ ಮಾಡಲೇಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿ ಕಾರಿ ಡಾ| ವಿ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಮನವಿ ಸಲ್ಲಿಸಲಾಯಿತು.