ಚಿತ್ರದುರ್ಗ: ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದು ರೈತರು ಮತ್ತು ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ಜಾರಿಗೆ ತರಬೇಕು. ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ತೀವ್ರ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಸುತ್ತಾಡಿ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿರುವ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ಕೋವಿಡ್ ನಿಯಂತ್ರಣ ನೆಪದಲ್ಲಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಕೋಟ್ಯಂತರ ರೂ. ಹಗರಣ ನಡೆಸಿರುವುದನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಕೋವಿಡ್ ದಿಂದ ಇಡೀ ವಿಶ್ವವೇ ತಲ್ಲಣಿಸಿದೆ. ದೇಶದ ಪ್ರಧಾನಿ ಪೂರ್ವಾಪರ ಯೋಚಿಸದೆ ಏಕಾಏಕಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ನಿತ್ಯ ದುಡಿದು ತಿನ್ನುವ ಬಡವರು ಸಂಕಷ್ಟಕ್ಕೆ ಸಿಲುಕಿದರು. ಉದ್ಯೋಗ ಹುಡುಕಿಕೊಂಡು ರಾಜ್ಯದಿಂದ ಬೇರೆ ಕಡೆ ವಲಸೆ ಹೋದವರು. ಬೇರೆ ರಾಜ್ಯಗಳಿಂದ ನಮ್ಮಲ್ಲಿಗೆ ಬಂದ ಕೂಲಿ ಕಾರ್ಮಿಕರು ಒಪ್ಪತ್ತಿನ ಊಟಕ್ಕೂ ಇಲ್ಲದೆ ಪರದಾಡಿದರು. ಅನೇಕರು ನೂರಾರು ಕಿಲೋಮೀಟರ್ ನಡೆದು ಪ್ರಾಣಬಿಟ್ಟ ಉದಾಹರಣೆಗಳು ಸಾಕಷ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳು ನಾಲ್ಕು ಲಕ್ಷ ರೂ.ಗೆ ಒಂದರಂತೆ ವೆಂಟಿಲೇಟರ್ಸ್ ಗಳನ್ನು ಖರೀ ಸಿದರೆ ರಾಜ್ಯ ಸರ್ಕಾರ 5.6 ಲಕ್ಷದಿಂದ 18.8 ಲಕ್ಷ ರೂ.ಗೆ ಒಂದರಂತೆ ವೆಂಟಿಲೇಟರ್ಸ್‌ಗಳನ್ನು ಖರಿಧೀಸಿ ಬ್ರಹ್ಮಾಂಡ ಭ್ರಷ್ಟಾಚಾರವೆಸಗಿದೆ. ಸ್ಯಾನಿಟೈಸರ್, ಪಿಪಿಇ ಕಿಟ್, ಥರ್ಮಲ್ ಸ್ಕ್ಯಾನಿಂಗ್, ಆಕ್ಸಿಜನ್ ಸಿಲಿಂಡರ್, ಮಾಸ್ಕ್ಗಳಲ್ಲಿಯೂ ಅಕ್ರಮವೆಸಗಿರುವ ಬಿಜೆಪಿ ಸರ್ಕಾರ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ 83 ಲಕ್ಷ ಜನರಿಗೆ ಫುಡ್‌ಕಿಟ್‌ಗಳನ್ನು ವಿತರಿಸಿದ್ದೇವೆಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಯಾರಿಗೆ ಎಲ್ಲಿ ಎಷ್ಟು ನೀಡಿದ್ದೇವೆಂಬ ವಿವರ ಒದಗಿಸಿಲ್ಲ. ವೈದ್ಯಕೀಯ ಪರಿಕರ ಖರೀದಿ ಸೇರಿದಂತೆ ಒಟ್ಟಾರೆ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರನ್ನು ಕೋರಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಉಪಾಧ್ಯಕ್ಷ ಅಜ್ಜಪ್ಪ, ನಜ್ಮತಾಜ್, ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಸಂಪತ್, ಬಿ.ಜಿ. ಶ್ರೀನಿವಾಸ್, ಸೈಯದ್ ಅಲ್ಲಾಭಕ್ಷಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಬಿ.ಟಿ. ಜಗದೀಶ್, ಆರ್.ಕೆ. ಸರ್ದಾರ್ ಮತ್ತಿತರರು ಭಾಗವಹಿಸಿದ್ದರು.