ಕಲಬುರಗಿ: ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕೃಷಿ, ಕೂಲಿ ಕಾರ್ಮಿಕರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅರಣ್ಯ ಭೂಮಿ ಹಕ್ಕು ಕಾಯ್ದೆ ದುಲರ್ಬಗೊಳಿಸಲು ಯತ್ನಿಸುತ್ತಿದ್ದು, ದೇಶಾದ್ಯಂತ ಲಕ್ಷಾಂತರ ಆದಿವಾಸಿಗಳು ಹಾಗೂ ಅರಣ್ಯವಾಸಿಗಳು ಒಕ್ಕಲೆಬ್ಬಿಸಲ್ಪಡುವ ಭೀತಿಯಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸುಪ್ರಿಂಕೋರ್ಟ್ ತಿರಸ್ಕೃತಗೊಂಡ ಅರಣ್ಯ ಭೂಮಿ ಹಕ್ಕುಗಳ ಅರ್ಜಿದಾರರನ್ನು ತಕ್ಷಣವೇ ಒಕ್ಕಲೆಬ್ಬಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಜನರ ಒತ್ತಾಯದ ಮೇರೆಗೆ ಆದೇಶಕ್ಕೆ ಜು.10ರ ವರೆಗೆ ತಡೆಯಾಜ್ಞೆ ಕೊಡಲಾಗಿತ್ತು. ಮುಂದಿನ ವಿಚಾರಣೆ ಜು.24ಕ್ಕೆ ಬರಲಿದೆ. ಈ ನಡುವೆ ಸರ್ಕಾರ ಸುಪ್ರಿಂಕೋರ್ಟ್ ನಿರ್ದೇಶನದಂತೆ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಕ್ರಮವಹಿಸಿದೆ. ಆದಾಗ್ಯೂ, ಲಕ್ಷಾಂತರ ಅರ್ಜಿದಾರರು ಭೀತಿಗೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಅಲ್ಲದೇ, ಕೇಂದ್ರ ಸರ್ಕಾರ 1927ರ ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡಿ ಅರಣ್ಯ ಹಾಗೂ ಖನಿಜ ಸಂಪನ್ಮೂಲಗಳನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಆದ್ದರಿಂದ ಕೂಡಲೇ ಆದಿವಾಸಿಗಳು ಹಾಗೂ ಅರಣ್ಯವಾಸಿಗಳು ಭೂಮಿ ಹಕ್ಕು ಪಡೆಯುವ ಕುರಿತಂತೆ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಡಾ| ಎಂ.ಎಸ್. ಸ್ವಾಮಿನಾಥನ್ ವರದಿ ಶಿಫಾರಸಿನಂತೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಸೂಕ್ತ ಬೆಲೆ ನೀಡಿ ಬೆಳೆಗಳ ಖರೀದಿಸುವ ಕಾಯ್ದೆ ಮತ್ತು ಎಲ್ಲ ಕೃಷಿಕರಿಗೆ ಅಗತ್ಯ ಸಾಲ ಒದಗಿಸಬೇಕು. ಬೆಳೆ ನಷ್ಟದ ಸಂದರ್ಭದಲ್ಲಿ ಮನ್ನಾ ಮಾಡುವ ಕಾಯ್ದೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಮಳೆ, ಬೆಳೆ ಇಲ್ಲದೇ ರೈತರು ಹಾಗೂ ಕೃಷಿ ಕೂಲಿಕಾರರು ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಕೂಡಲೇ ಅದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬೇಸಿಗೆಯಲ್ಲಿ ಕೆಲಸ ಮಾಡಿದ ಉದ್ಯೋಗ ಖಾತ್ರಿ ಯೋಜನೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಪಾಂಡುರಂಗ ಮಾವಿನ, ಮಲ್ಲಣಗೌಡ ಬನ್ನೂರ, ಶಾಂತಪ್ಪ ಪಾಟೀಲ, ಸುಭಾಷ ಹೊಸಮನಿ, ಸಿದ್ದಲಿಂಗಯ್ಯಸ್ವಾಮಿ ಯಂಪಳ್ಳಿ, ಸಿದ್ದು ಪಾಳಾ, ಸಿದ್ದರಾಮ, ಪರಶುರಾಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.