ದೊಡ್ಡಬಳ್ಳಾಪುರ: ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಹಾಗೂ ಕಾಯ್ದೆ ಹಿಂಪಡೆಯಲು ಸೆ.21 ರಂದು ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟ ನಾರಾಯಣಪ್ಪ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತ ವಿರೋಧಿ ಕಾಯ್ದೆಗಳ ಜಾರಿ ಮೂಲಕ ರೈತರು ಕೃಷಿಯಿಂದ ತಾವಾಗಿಯೇ ವಿಮುಖರಾಗುವಂತೆ ಮಾಡಲಾಗುತ್ತಿದೆ. ವಿದ್ಯುತ್ ಕಂಪನಿಗಳನ್ನು ಸಂಪೂರ್ಣವಾಗಿ ಖಾಸಗಿ ಕಂಪನಿಗಳಿಗೆ ವಹಿಸುವ ಮೂಲಕ ಕೃಷಿಗೆ ಉಚಿತ ವಿದ್ಯುತ್ ಪೂರೈಕೆ ನಿಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇಂತಹ ರೈತ ವಿರೋಧಿ ನೀತಿಗಳ ವಿರುದ್ಧ ರಾಜ್ಯದ ಎಲ್ಲಾ ಸಂಘಟನೆಗಳು ಒಟ್ಟುಗೂಡಿ ಬೆಂಗಳೂರಿನಲ್ಲಿ ಸೆ.21 ರಂದು ನಡೆಸುತ್ತಿರುವ ಐತಿಹಾಸಿಕ ಹೋರಾಟಕ್ಕೆ ರೈತರಷ್ಟೇ ಅಲ್ಲದೆ ಎಲ್ಲಾ ವರ್ಗದ ಜನ ಬೆಂಬಲಿಸಬೇಕೆಂದರು.
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಆರ್. ಪ್ರಸನ್ನ, ಇಡೀ ದೇಶದ ಜನ ಕೊರೊನಾ ಮಹಾಮಾರಿ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಶಾಸನಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಪ್ರಜಾಪ್ರಭುತ್ವ ವಿರೋಧಿ. ಚೀನಾ ಸೈನಿಕರು ನಮ್ಮ ಗಡಿಯಲ್ಲಿ ನುಗ್ಗಿ ನಮ್ಮ ಯೋಧರನ್ನು ಕೊಂದಾಗ ದೇಶದ ಭದ್ರತೆ ಕಡೆಗೆ ಇಡೀ ದೇಶದ ಜನ ಚಿಂತಿಸುತ್ತಿದ್ದರು. ಆದರೆ ಪ್ರಧಾನ ಮಂತ್ರಿ ನರೇಂದ್ರಮೋದಿ ಮಾತ್ರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವಲ್ಲಿ ಉತ್ಸುಕರಾಗಿದ್ದರು.
ಇದೇ ರೀತಿ ರಾಜ್ಯ ಸರ್ಕಾರ ಭೂ ಸೂಧಾರಣ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸು ತ್ತಿದ್ದಾರೆ. ನಮ್ಮ ಮನವಿಗೆ ಸರ್ಕಾರ ಸ್ಪಂದಿಸದೇ ಇದ್ದರೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಆರ್. ಎಸ್.ಸತೀಶ್, ತಾಲೂಕು ಕಾರ್ಯದರ್ಶಿ ಶಿವರಾಜ್ ಶಿವಪುರ, ದೇವನಹಳ್ಳಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ತೂಬಗೆರೆ ಹೋಬಳಿ ಘಟಕದ ಅಧ್ಯಕ್ಷ ಮುನಿನಾರಾಯಣಪ್ಪ, ಮುಖಂಡರಾದ ವಸಂತ್, ವಾಸು, ಶಿರವಾರ ರವಿ, ಕಾಂತರಾಜ್, ಮಹದೇವ್, ಕುಮಾರ್ ಇದ್ದರು.