ಚನ್ನಪಟ್ಟಣ: ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ಲಿಯೋನ್ ವಿರುದ್ಧ ಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ನಡೆಸಿ ಆಕೆಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿತು.
ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿ ಜಮಾ ವಣೆಗೊಂಡ ಪ್ರತಿಭಟನಾಕಾರರು, ದೇಶದ್ರೋಹಿ ಅಮೂಲ್ಯ ವಿರುದ್ಧ ಧಿಕ್ಕಾರ ಕೂಗಿ, ಕಾನೂನು ಕ್ರಮ ಜರುಗಿಸಿ ಆಕೆಯನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ಗೌಡ, ಭಯೋತ್ಪಾದಕ ಕೃತ್ಯಗಳಿಗೆ ಯುವಕರನ್ನು ಬಳಸಿಕೊಂಡು ನೆರೆ ಹೊರೆ ದೇಶಗಳಲ್ಲಿ ಅಶಾಂತಿಯನ್ನುಂಟು ಮಾಡುತ್ತಿರುವ ನರಿಬುದ್ಧಿಯ ಪಾಕಿಸ್ಥಾನದ ಪರ ನಮ್ಮ ನೆಲದಲ್ಲಿ ನಿಂತು ಘೋಷಣೆ ಕೂಗುವುದು ಖಂಡನೀಯ. ಆ ದೇಶದ ಬಗ್ಗೆ ಕಾಳಜಿ ಇದ್ದರೆ, ಆ ದೇಶದಲ್ಲಿ ಹೋಗಿ ನೆಲೆಸಲಿ, ಆಕೆಯ ಹಿಂದಿರು ವವರು ಯಾರು ಎಂಬ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಡಾ.ರಾಜ್ ಕಲಾ ಬಳಗದ ಅಧ್ಯಕ್ಷ ಎಲೇಕೇರಿ ಮಂಜುನಾಥ್, ಪಾಕ್ ಪರ ಘೋಷಣೆ ಕೂಗುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಇದೊಂದು ದೊಡ್ಡ ಪ್ರಮಾದ. ನಮ್ಮ ನೀರು, ಆಹಾರ, ಗಾಳಿ ಸೇವಿಸಿ ನಮ್ಮ ದೇಶಕ್ಕೆ ನಿಷ್ಠರಾಗಿರಬೇಕು. ಇಂತಹ ದೇಶದ್ರೋಹಿಗಳ ಹಿಂದೆ ಇರುವವರನ್ನು ಪತ್ತೆ ಮಾಡಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು. ಹಿಂದೂ ಜಾಗರಣಾ ವೇದಿಕೆಯ ಗಜೇಂದ್ರ ಸಿಂಗ್ ಮಾತನಾಡಿ, ಇಂತಹ ದೇಶದ್ರೋಹಿಗಳಿಗೆ ಕಾನೂನು ನೆರವು ಕೊಡಬಾರದು. ಅಮೂಲ್ಯಳಂತಹ ಯುವತಿಯನ್ನು ಮುಂದೆ ಇಟ್ಟುಕೊಂಡು ಅಶಾಂತಿಯನ್ನುಂಟು ಮಾಡುವ ದೇಶ ದ್ರೋಹಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದರು.
ಕಕಜವೇ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ ಗೌಡ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ಮಾಡಿಸಿ ಬಿಗಿಯಾದ ನಿಲುವು ತೆಗೆದುಕೊಂಡು ದೇಶದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಲ್‌ಐಸಿ ನಾಗರಾಜು, ಕಕಜವೇ ಪದಾಧಿಕಾರಿಗಳಾದ ಚೇತನ್ ಕೀಕರ್, ಮಾರ್ಚನಹಳ್ಳಿ ನರಸಿಂಹ, ರೋಸಿ, ನಾಗೇಶ್, ಎಲೇಕೇರಿ, ರವೀಶ್, ಟೆಂಪೋ ರಾಜೇಶ್, ಆಟೋ ಶೀನ, ಆಟೋ ವೆಂಕಟೇಶ್, ಸಿದ್ದು, ಶ್ಯಾಮ್, ಚಿಕ್ಕಣ್ಣ, ಸತೀಶ್, ಪ್ರಕಾಶ್, ಗವಿಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.