ಬೆಂಗಳೂರು: ಐಎಂಎ ಕಂಪನಿಯ ನೂರಾರು ಕೋಟಿ ರೂ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಎಐಎಂಎಂಎಸ್ (ಏಮ್ಸ್)ವೆಂಚರ್ಸ್ ಕಂಪನಿಯ ನೂರಾರು ಮಂದಿ ಹೂಡಿಕೆದಾರರು ಮಂಗಳವಾರ ಜಯನಗರದಲ್ಲಿರುವ ಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸೋಮವಾರ ಮಧ್ಯಾಹ್ನ ಜಯನಗರದ 9ನೇ ಬ್ಲಾಕ್‌ನಲ್ಲಿರುವ ಏಮ್ಸ್ ವೆಂಚರ್ಸ್ ಕಂಪನಿಯ ಮುಂಭಾಗ ಸೇರಿದ ನೂರಾರು ಹೂಡಿಕೆದಾರರು, ವಂಚಕರು ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ವಂಚನೆ ಸಂಬಂಧ ಪ್ರಕರಣ ದಾಖಲಿಸಿದರೂ ಪೊಲೀಸರು ಕ್ರಮಕೈಗೊಂಡಿಲ್ಲ. ಸರಿಯಾದ ತನಿಖೆ ನಡೆಸದೆ ಆರೋಪಿಗಳಿಗೆ ಜಾಮೀನು ಪಡೆದುಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ವಂಚನೆ ಪ್ರಕರಣ ಸಂಬಂಧ ಕೆಲ ಹೂಡಿಕೆದಾರರು ಜನವರಿಯಲ್ಲೇ ತಿಲಕನಗರ ಹಾಗೂ ಇತರೆ ಪೊಲೀಸ್ ಠಾಣೆಗಳಲ್ಲಿ ಕಂಪನಿಯ ಮೊಹಮ್ಮದ್ ಶಾಹಿದ್, ಆಯುಬ್ ಅಲಿ ಖಾನ್, ಇಲಿಯಾಜ್, ಮುದಾಸೀರ್ ಪಾಷಾ, ಮೊಹಮ್ಮದ್ ಮುಜಾಹಿದ್ ಉಲ್ಲಾ ಎಂಬುವರ ವಿರುದ್ಧ ದೂರು ನೀಡಿದ್ದರು. ಬಹುಕೋಟಿ ವಂಚನೆಯಾದರಿಂದ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗಕ್ಕೆ ವರ್ಗಾಹಿಸಲಾಗಿತ್ತು. ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದರೆ, ಸದ್ಯ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಆರೋಪಿಗಳು ಹೂಡಿಕೆ ಹಣಕ್ಕೆ ಮಾಸಿಕ ಶೇ.3ರಷ್ಟು ಲಾಭಂಶ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಹೂಡಿಕೆ ಹಣವನ್ನು ರಿಯಲ್ ಎಸ್ಟೇಟ್, ಇಕ್ವಿಟಿ ಮಾರ್ಕೆಟಿಂಗ್ ಹಾಗೂ ಇತರೆಡೆ ಹೂಡಿಕೆ ಮಾಡುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ನೂರಾರು ಮಂದಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು. ಅಂದಾಜಿನ ಪ್ರಕಾರ ಕಂಪನಿ 14 ಕೋಟಿಗೂ ಅಧಿಕ ರೂ. ವಂಚನೆ ಮಾಡಿದೆ ಎಂದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.