ವಾಡಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಖೀಲ ಭಾರತ ಬಂಜಾರಾ ಸೇವಾ ಸಂಘದ ನೇತೃತ್ವದಲ್ಲಿ ಎಸಿಸಿ ಕಂಪನಿ ವಿರುದ್ಧ ಲಂಬಾಣಿಗರ ಬೃಹತ್ ಪ್ರತಿಭಟನೆ ನಡೆಯಿತು. ಅಂಬೇಡ್ಕರ್ ವೃತ್ತದಿಂದ ಎಸಿಸಿ ಕಂಪನಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ, ಇಡೀ ವಿಶ್ವಕ್ಕೆ ಸಿಮೆಂಟ್ ರಫ್ತು ಮಾಡಿ ಏಶಿಯಾ ಖಂಡದಲ್ಲೇ ಮೊದಲ ಸಾಲಿನಲ್ಲಿರುವ ಎಸಿಸಿ, ಸ್ಥಳೀಯರಿಗೆ ಉದ್ಯೋಗ ನೀಡದೆ ಬಿಹಾರ, ಉತ್ತರ ಪ್ರದೇಶ, ಓರಿಸ್ಸಾ ಹಾಗೂ ಬಾಂಗ್ಲಾದಿಂದ ಕಾರ್ಮಿಕರನ್ನು ಕರೆ ತರುತ್ತಿದೆ ಎಂದು ಹರಿಹಾಯ್ದರು.
ಕ್ಷೇತ್ರದ ಶಾಸಕ ಹಾಗೂ ಸಂಸದರು ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಮನೆ ಮಾಡಿದ್ದಾರೆ. ಅವರಿಗೆ ಕಾರ್ಮಿಕರ ಅರ್ಥನಾದ ಕೇಳಿಸುತ್ತಿಲ್ಲ. ಚುನಾವಣೆ ಸಮೀಪಿಸಿದೆ. ಈಗಲಾದರೂ ಎಸಿಸಿ ಕಂಪನಿ ಪಕ್ಕದಲ್ಲೇ ಮೂರು ತಿಂಗಳ ಕಾಲ ಮನೆ ಮಾಡಿಕೊಂಡು ಇದ್ದು ನೋಡಲಿ. ಆಗ ಗೊತ್ತಾಗುತ್ತದೆ ಧೂಳು ತಿನ್ನುವ ಕಾರ್ಮಿಕರ ಕಷ್ಟ ಎಂಥಹದ್ದು ಎಂದು ವಾಗ್ಧಾಳಿ ನಡೆಸಿದರು. ಕಂಪನಿಯಲ್ಲಿ ಆಕಸ್ಮಿಕ ಅಗ್ನಿ ಅವಘಡಕ್ಕೆ ಗಾಯಗೊಂಡ ಇಬ್ಬರು ಗುತ್ತಿಗೆ ಕಾರ್ಮಿಕರಿಗೆ ಖಾಯಂ ಉದ್ಯೋಗ ನೀಡಬೇಕು.
ಎಸಿಸಿ ವತಿಯಿಂದಲೇ ಪಟ್ಟಣದಲ್ಲಿ ಕಾಲೇಜು ಮತ್ತು ಆಸ್ಪತ್ರೆ ತೆರೆಯಬೇಕು ಎಂದು ಒತ್ತಾಯಿಸಿದರು. ಸಮಸ್ಯೆ ಬಗೆಹರಿಯದಿದ್ದರೆ ಇವತ್ತಿನ ಶಾಂತಿಯುತ ಹೋರಾಟ ನಾಳೆ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಆಂದೋಲಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಉದ್ಯೋಗ ಕೇಳುವ ಸ್ಥಳೀಯ ನಿರುದ್ಯೋಗಿಗಳ ಹೋರಾಟ ಹತ್ತಿಕ್ಕಲು ಎಸಿಸಿಯವರು ಪೊಲೀಸ್ ಇಲಾಖೆ ಬಲ ಬಳಸಿಕೊಳ್ಳುತ್ತಿದ್ದಾರೆ. ಬ್ರಿಟಿಷ್ ಕಂಪನಿ ನೀತಿ ಅನುಸರಿಸುವ ಮೂಲಕ ಕಾರ್ಮಿಕರನ್ನು ಗುಲಾಮರಂತೆ ಕಾಣುತ್ತಿದ್ದಾರೆ. ಹೊಟ್ಟೆ ಹೊರೆಯಲು ಪ್ರಾಣ ಪಣಕ್ಕಿಡುತ್ತಿರುವ ಕಾರ್ಮಿಕರಿಗೆ ಜೀವಭದ್ರತೆಯಿಲ್ಲ. ಜನಪ್ರತಿನಿಧಿಗಳು ಕಾರ್ಮಿಕರ ಅರಣ್ಯರೋಧನ ಕೇಳಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಬಂಜಾರಾ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ ಚವ್ಹಾಣ, ಜಿಲ್ಲಾಧ್ಯಕ್ಷ ಶತ್ರು ರಾಠೊಡ ಮಾತನಾಡಿದರು. ವಲಯ ಘಟಕದ ಅಧ್ಯಕ್ಷ ಶಂಕರ ಜಾಧವ, ಮುಖಂಡರಾದ ವಿಠ್ಠಲ ನಾಯಕ, ಸೋಮಲಾ ಚವ್ಹಾಣ, ರಾಮದಾಸ ಚವ್ಹಾಣ, ಶ್ರೀಕಾಂತ ಚವ್ಹಾಣ, ಶ್ರೀಸೈಲ ನಾಟೀಕಾರ, ವೀರಣ್ಣ ಯಾರಿ, ಯುವರಾಜ ರಾಠೊಡ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಗ್ರೇಡ್-2 ತಹಶೀಲ್ದಾರ ರವೀಂದ್ರ ಧಾಮಾ ಮನವಿ ಸ್ವೀಕರಿಸಿದರು. ಈ ಕುರಿತು ಚರ್ಚಿಸಿ ಬೇಡಿಕೆ ಈಡೇರಿಸುವುದಾಗಿ ಎಸಿಸಿ ಕಂಪನಿ ಮುಖ್ಯಸ್ಥ ಡಾ|ಎಸ್.ಬಿ. ಸಿಂಗ್ ಭರವಸೆ ನೀಡಿದರು.