Advertisement

ಕೊರೊನಾ ಅಪಾಯ ಭತ್ಯೆ ನೀಡಲು ಒತ್ತಾಯ

05:11 PM Nov 30, 2021 | Suhan S |

ಶಿವಮೊಗ್ಗ: ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಶುಲ್ಕ ಪುನರ್‌ ರಚಿಸಬೇಕು. ಕೋವಿಡ್‌ ಅಪಾಯ ಭತ್ಯೆ ಪಾವತಿಸಬೇಕು. ಸ್ನಾತಕೋತ್ತರ ಪದವೀಧರರು ಮತ್ತು ಇಂಟರ್ನಲ್‌ಗ‌ಳಿಗೆ ಸ್ಪ್ರೈಫಂಡ್‌ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಸ್ಥಾನಿಕ ವೈದ್ಯಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಸಿಮ್ಸ್‌ ಮೆಡಿಕಲ್‌ ಕಾಲೇಜು ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಕೊರೊನಾ ಸಾಂಕ್ರಾಮಿಕ ರೋಗದ ನಿರ್ವಹಣೆ ಸಂದರ್ಭದಲ್ಲಿ ಸ್ಥಾನಿಕ ವೈದ್ಯರು ಹಗಲಿರುಳು ಶ್ರಮಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಸೋಂಕಿಗೆ ಒಳಗಾಗುವ ಅಪಾಯವಿದ್ದರೂ ಕೆಲಸ ಮಾಡಿದ್ದೇವೆ. ಸ್ನಾತಕೋತ್ತರ ಪದವಿಧರರು ಕನಿಷ್ಠ ಕ್ಲಿನಿಕಲ್‌ ಮತ್ತು ಇತರೆ ಕೌಶಲ್ಯ ಕಲಿಯದೇ ಅರ್ಧದಷ್ಟು ಕೋರ್ಸ್‌ ಅವಧಿಯನ್ನು ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಎಲ್ಲ ಸ್ಥಾನಿಕ ವೈದ್ಯರಿಗೆ ತಿಂಗಳಿಗೆ 10 ಸಾವಿರ ರೂ. ಕೋವಿಡ್‌ ಭತ್ಯೆ ಘೋಷಿಸಿದೆ. ಘೋಷಣೆಯಾಗಿ 6 ತಿಂಗಳು ಕಳೆದರೂ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಇಂದಿಗೂ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಬಗೆಗಿನ ನಿರ್ಲಕ್ಷÂಕ್ಕೆ ಇದು ಸಾಕ್ಷಿ ಎಮದು ಪ್ರತಿಭಟನಾಕಾರರು ದೂರಿದರು.

ಸ್ಥಾನಿಕ ವೈದ್ಯರ ಶೈಕ್ಷಣಿಕ ಶುಲ್ಕವನ್ನು 30 ಸಾವಿರದಿಂದ 1.2 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಇದು ಸುಮಾರು ಶೇ.400 ರಷ್ಟು ಹೆಚ್ಚಳವಾಗಿದೆ. ಯಾವುದೇ ರಿಯಾಯಿತಿ ಇಲ್ಲದೇ ಸಂಪೂರ್ಣ ಮೊತ್ತ ಪಾವತಿಸಬೇಕಿರುವುದರಿಂದ ತೊಂದರೆಯಾಗಿದೆ ಎಂದು ದೂರಿದರು.

ಈ ಹಿಂದೆ ಪ್ರತಿಭಟನೆ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಭರವಸೆಯ ಮೇರೆಗೆ ಮುಷ್ಕರ ಕೈಬಿಡಲಾಗಿತ್ತು. ಆದರೆ, ಇದುವರೆಗೂ ಭರವಸೆ ಈಡೇರಿಸಿಲ್ಲ. ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದ ಕೋವಿಡ್‌ ಅಪಾಯಭತ್ಯೆ ಪ್ಯಾಕೇಜ್‌ ನಿಂದ ಸ್ಥಾನಿಕ ವೈದ್ಯರನ್ನು ಹೊರಗಿಡಲಾಗಿದೆ ಎಂದು ಆರೋಪಿಸಿದರು.

ಕೂಡಲೇ ಬೇಡಿಕೆ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸ್ಥಾನಿಕ ವೈದ್ಯರ ಸಂಘದ ಅಧ್ಯಕ್ಷ ಡಾ| ನವೀನ್‌ ಪ್ರಸಾದ್‌, ಪ್ರಮುಖರಾದ ಡಾ| ನಮ್ರತಾ, ಡಾ| ಅವಿನಾಶ್‌, ಡಾ| ರಾಹುಲ್‌ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next