ಬೆಳಗಾವಿ: ರಾಜ್ಯ ಅಂಗವಿಕಲರು ಹಾಗೂ ವಿವಿಧೋದ್ದೇಶ, ಗ್ರಾಮೀಣ ಮತ್ತು ನಗರ ಪುನರ್ವಸತಿ ಅಂಗವಿಕಲರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಗುರುವಾರವೂ ಮುಂದುವರಿದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಬರುವವರೆಗೆ ಪ್ರತಿಭಟನೆ ಹಿಂಪಡೆಯದಿರಲು ನಿರ್ಧರಿಸಿದ್ದಾರೆ.
ಪುನರ್ವಸತಿ ಕಾರ್ಯಕರ್ತರ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ನಡೆಸಿದ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರದಿಂದ ಆರಂಭಿಸಿರುವ ಧರಣಿಯಿಂದ ಹಿಂದಕ್ಕೆ ಸರಿಯಲು ಒಪ್ಪದ ಕಾರ್ಯಕರ್ತರು, ಮಳೆ-ಬಿಸಿಲು ಲೆಕ್ಕಿಸದೇ ಮುಂದುವರಿಸಿದ್ದಾರೆ. ಸ್ಥಳಕ್ಕೆ ಸಚಿವೆ ಜೊಲ್ಲೆ ಬರುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ. ಸ್ಥಳಕ್ಕೆ ಜನಪ್ರತಿನಿ ಧಿಗಳು, ಜಿಲ್ಲಾಧಿಕಾರಿಗಳು ಭೇಟಿ ನೀಡಿಲ್ಲ. ಬೇಡಿಕೆಗಳಿಗೆ ಸ್ಪಂದಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಜಿಪಂ ಸಿಇಒ ಡಾ. ರಾಜೇಂದ್ರ ಕೆ.ವಿ. ಭೇಟಿ ನೀಡಿ ಅಂಗವಿಕಲರ ಮನವಿ ಸ್ವೀಕರಿಸಿದರು. ಧರಣಿ ಹಿಂಪಡೆಯುವಂತೆ ಪ್ರತಿಭಟನಾಕಾರರ ಮನವೊಲಿಸಲೂ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪೊಲೀಸರು ಬಂದು ಧರಣಿ ಹಿಂಪಡೆಯಲು ಮನವೊಲಿಸಿದರೂ ಇದಕ್ಕೆ ಒಪ್ಪದೇ ಮುಂದುವರಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುತ್ತಿದ್ದಾರೆ. ರಾಜ್ಯದ 6022 ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನಗರ ಪ್ರದೇಶದಲ್ಲಿ 613 ಜನ ಹಾಗೂ 176 ತಾಲೂಕು ಪಂಚಾಯತ್‌ಗಳಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ.
ಸರಿಯಾದ ವೇತನ ಇಲ್ಲದೇ ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ಕೇವಲ ಮೂರು ಸಾವಿರ ರೂ. ಮತ್ತು ವಿವಿಧೋದ್ದೇಶ ಕಾರ್ಯಕರ್ತರಿಗೆ ಆರು ಸಾವಿರ ರೂ. ಗೌರವ ಧನ ನೀಡಲಾಗುತ್ತಿದೆ. ಈ ವೇತನ ಯಾವುದಕ್ಕೂ ಸಾಲುತ್ತಿಲ್ಲ. ವೇತನ ಹೆಚ್ಚಳಕ್ಕಾಗಿ ಅನೇಕ ಸಲ ಹೋರಾಟ ಮಾಡಿದರೂ ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ರಾಜ್ಯ ಒಕ್ಕೂಟದ ಅಧ್ಯಕ್ಷ ಫಕ್ಕೀರಗೌಡ ಪಾಟೀಲ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಿರಣ ಈಳಗೇರ, ಸೂರಜ ಧಾಮಣೇಕರ, ಮಹಾಂತೇಶ ಹೊಂಗಲ, ನಾಗೇಶ ಕುಂಬಾರ ಇತರರು ಇದ್ದರು.