Advertisement

ಕಾಡಾನೆ ದಾಳಿಗೆ ಕಾರ್ಮಿಕ ಬಲಿ; ಭುಗಿಲೆದ್ದ ಆಕ್ರೋಶ

05:05 PM Feb 12, 2021 | Team Udayavani |

ಹಾಸನ: ಕಾಡಾನೆಯ ದಾಳಿಗೆ ಬಲಿಯಾದ ಕಾಫಿ ತೋಟದ ಕಾರ್ಮಿಕನ ಮೃತದೇಹವನ್ನು ಜಿಲ್ಲಾಧಿಕಾರಿ ಕಚೇರಿ ಆವಣದಲ್ಲಿರಿಸಿ ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದ, ಗ್ರಾಮಸ್ಥರು ಅರಣ್ಯ ಸಚಿವರ ನೇತೃತ್ವದಲ್ಲಿ ಸಭೆ ನಿಗದಿಪಡಿಸುವಲ್ಲಿ ಯಶಸ್ವಿಯಾದರು. ಸಕಲೇಶಪುರ ತಾಲೂಕಿನ ಹಲಸುಲಿಗೆ ಸಮೀಪದ ಹಸಿಡೆ ಗ್ರಾಮದಲ್ಲಿ ಮಡಿಕೇರಿ ಮೂಲದ ವಸಂತ್‌ (55) ಎಂಬುವರ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಬುಧವಾರ ರಾತ್ರಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿತು. ಕಾಡಾನೆಯ ತುಳಿತದಿಂದ ತೀವ್ರವಾಗಿ ಗಾಯಗೊಂಡ ವಸಂತ್‌ ಅವರನ್ನು ಹಾಸನದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟರು.

ವಸಂತ್‌ ಅವರು ಮೃತಪಟ್ಟ ವಿಷಯ ತಿಳಿದ ಹಲಸುಲಿಗೆ, ಹಸಿಡೆ ಮತ್ತಿತರ ಗ್ರಾಮಗಳ ಜನರು, ಜೆಡಿಎಸ್‌ ರಾಜ್ಯಾಧ್ಯಕ್ಷ, ಶಾಸಕ ಎಚ್‌. ಕೆ.ಕುಮಾರಸ್ವಾಮಿ ಅವರೊಂದಿಗೆ ಹಾಸನಕ್ಕೆ ಬಂದರು. ವಸಂತ್‌ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ನಂತರ ಜಿಲ್ಲಾಧಿಕಾರಿಯವರ ಕಚೇರಿಯ ಆವರಣಕ್ಕೆ ಕೊಂಡೊಯ್ದು ಧರಣಿ ಕುಳಿತರು.

ಸಚಿವರು ಸ್ಥಳಕ್ಕೆ ಬರಲು ಪಟ್ಟು: ಮಲೆನಾಡು ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಮನೆಯಿಂದ ಜನರು ಹೊರಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಯ ಹಾವಳಿ ತಡೆಗೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಅರಣ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರುವವರೆಗೂ ಮೃತದೇಹವನ್ನು ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದರು.

ಶಾಶ್ವತ ಕ್ರಮ ಘೋಷಿಸಲಿ: ಶಾಸಕ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ಅರಣ್ಯ ಸಚಿವರುಹಿರಿಯ  ಅಧಿಕಾರಿಗಳೊಂದಿಗೆ ಸಕಲೇಶಪುರಕ್ಕೇ ಬಂದು ರೈತರ ಸಭೆ ನಡೆಸಿ ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮಗಳ ಬಗ್ಗೆ ಚರ್ಚಿಸಬೇಕು. ಕಳೆದ 6 ವರ್ಷಗಳ ಹಿಂದೆ ಆನೆ ಕಾರಿಡರ್‌ ನಿರ್ಮಿಸುವ ಬಗ್ಗೆ ಚರ್ಚೆ ನಡೆಯಿತೇ ವಿನಃ ಕಾರ್ಯಗತವಾಗಲಿಲ್ಲ. ಈಗಲಾದರೂ ಅರಣ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಕಲೇಶಪುರಕ್ಕೆ ಬಂದು ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮಗಳ ಬಗ್ಗೆ ಘೋಷಣೆ ಮಾಡಬೇಕು ಎಂದು ಆಗ್ರಹಪಡಿಸಿದರು.

Advertisement

ಸರ್ಕಾರದಿಂದ ಖಚಿತ ಭರವಸೆ ಸಿಗುವವರೆಗೂ ಶವವನ್ನು ಮೇಲೆತ್ತುವುದಿಲ್ಲ ಎಂದು ಪಟ್ಟು ಹಿಡಿದರು. ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಅರಣ್ಯ ಸಚಿವರನ್ನು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಫೆ.16 ರಂದು ಅರಣ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಕಲೇಶಪುರದಲ್ಲಿ ಉನ್ನತ ಮಟ್ಟದ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಲಿಖೀತ ಭರವಸೆ ನೀಡಿದರು. ತಾತ್ಕಾಲಿಕ ಪರಿಹಾರವಾಗಿ ಮೃತ ವಸಂತ್‌ ಕುಟುಂಬಕ್ಕೆ 2.50 ಲಕ್ಷ

ರೂ. ಚೆಕ್‌ನ್ನೂ  ವಿತರಿಸಿದರು. ಆನಂತರ ಪ್ರತಿಭಟನಾಕಾರು ಪ್ರತಿಭಟನೆಯನ್ನು ಹಿಂತೆಗೆದು ಕೊಂಡು ಮೃತನ ಸ್ವಗ್ರಾಮಕ್ಕೆ ಶವ ಸಂಸ್ಕಾರಕ್ಕೆ ಹೊರಟರು. ಜಿಪಂ ಸದಸ್ಯೆ ಚಂಚಲ ಕುಮಾರಸ್ವಾಮಿ, ಮುಖಂಡರಾದ ಯಡೆಹಳ್ಳಿ ಮಂಜುನಾಥ್‌, ಆದಿ ದ್ರಾವಿಡ ಸಂಘದ ಜಿಲ್ಲಾಧ್ಯಕ್ಷ ಶಂಕರ್‌, ಪ್ರದೀಪ್‌, ಮಂಜುನಾಥ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next