ಉಳ್ಳಾಲ: ಮೀನುಗಾರಿಕೆಯ ದೋಣಿಯಿಂದ ಸಮುದ್ರಕ್ಕೆ ಬಿದ್ದಿದ್ದ ಮೀನುಗಾರನೊರ್ವನನ್ನು ಉಳ್ಳಾಲ ಉಳಿಯದ ಮೀನುಗಾರರ ತಂಡದವರು ರಕ್ಷಿಸಿದ ಘಟನೆ ಶನಿವಾರ ನಡೆದಿದೆ.
ಬೆಂಗ್ರೆ ನಿವಾಸಿ ನವಾಝ್ (35) ರಕ್ಷಣೆಗೊಳಗಾದವರು. ಓಷಿಯನ್ ಬ್ರೀಝ್ ದೋಣಿಯಲ್ಲಿದ್ದ ಉಳಿಯ ನಿವಾಸಿ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್ ಡಿ,ಸೋಜ ಹಾಗೂ ಬೆಂಗ್ರೆ ನಿವಾಸಿ ರಿತೇಶ್ ಮತ್ತು ಅಜಿತ್ ಮೀನುಗಾರನನ್ನು ರಕ್ಷಿಸಿದವರು.
ಶನಿವಾರ ಬೆಳಗ್ಗೆಯಿಂದಲೇ ಸಮುದ್ರದ ಅಬ್ಬರ ಹೆಚ್ಚಿದ್ದು, ಅನೇಕ ದೋಣಿಗಳು ಮೀನುಗಾರಿಕೆಗೆ ತೆರಳದೆ ಉಳಿದಿತ್ತು. ಆದರೆ, ನವಾಝ್ ಇದ್ದ ದೋಣಿ ಸಮುದ್ರಕ್ಕೆ ತೆರಳಿ ಬಲೆ ತೆಗೆದು ವಾಪಾಸ್ ಆಗುತ್ತಿದ್ದಾಗ ಅಳಿವೆ ಬಾಗಿಲು ಸಮೀಪ ಕಲ್ಲುಗಳ ಮಧ್ಯೆಯಿಂದ ಭಾರೀ ಗಾಳಿಯೊಂದು ಅಪ್ಪಳಿಸಿತ್ತು. ಪರಿಣಾಮ ನವಾಝ್ ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದ. ಆದರೆ, ಅಲೆಗಳ ಅಪ್ಪಳಿಸುವಿಕೆಯಿಂದಾಗಿ ದೋಣಿ ನಿಲ್ಲಿಸಲಾಗಲಿಲ್ಲ. ನವಾಝ್‍ಗೆ ತಾತ್ಕಾಲಿಕ ರಕ್ಷಣೆಗೆ ದೋಣಿಯಲ್ಲಿದ್ದ ಥರ್ಮೋಕಾಲ್ ಎಸೆಯಲಾಗಿತ್ತು. ಅದರ ಸಹಾಯದೊಂದಿಗೆ ಆತ ಸಮುದ್ರದ ಅಲೆಗಳ ನಡುವೆ ಮುಳುಗೇಳುತ್ತಿದ್ದ.
ಇತ್ತ ಓಷಿಯನ್ ಬ್ರಿಝ್ ದೋಣಿಯಲ್ಲಿದ್ದ ಮೀನುಗಾರರು ಶುಕ್ರವಾರ ಮೀನುಗಾರಿಕೆಗೆ ಬಲೆ ಹಾಕಿ ವಾಪಸ್ಸಾಗಿದ್ದರು. ಶನಿವಾರ ಬಲೆಯಲ್ಲಿ ಬಿದ್ದಿರುವ ಮೀನುಗಳನ್ನು ತರಲು ಅಳಿವೆ ಬಾಗಿಲಿನ ಮೂಲಕ ತರಲು ಹೋಗಿದ್ದು ದೋಣಿ ವಾಪಾಸ್ಸಾಗಿ ಅಳಿವೆ ಬಾಗಿಲಿನತ್ತ ಬರುತ್ತಿದ್ದಾಗ ಸಮುದ್ರ ದಡದಲ್ಲಿದ್ದ ಓಷಿಯನ್ ಬ್ರಿಝ್ ದೋಣಿಯ ಮಾಲೀಕ ನಿಶಾನ್ ಜಾಯ್ ಅವರು ತನ್ನ ದೋಣಿಯಲ್ಲಿದ್ದ ಮೀನುಗಾರರಿಗೆ ಓರ್ವ ಸಮುದ್ರದ ಅಳಿವೆ ಬಾಗಿಲಿನಲ್ಲಿ ಸಿಲುಕಿದ್ದ ಮಾಹಿತಿ ನೀಡಿದ್ದರು.
ಸಮುದ್ರದ ಅಲೆಗಳ ನಡುವೆ ಸುಮಾರು ಹತ್ತು ನಿಮಿಷ ಹುಡುಕಾಟದ ಬಳಿಕ ಉಳ್ಳಾಲ ಅಳಿವೆ ಬಳಿ ಸಮುದ್ರದ ಅಲೆಗಳ ನಡುವೆ ವ್ಯಕ್ತಿಯೊಬ್ಬ ಮುಳುಗೇಳುತ್ತಿದುದ್ದನ್ನು ಕಂಡಾಗ ಮೀನುಗಾರರ ತಂಡ ಆತನ ಬಳಿ ತೆರಳಿ ದೋಣಿಯ ಮೂಲಕ ಹಗ್ಗವನ್ನು ಬಿಸಾಕಿ ಯುವಕನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಅಳಿವೆ ಬಾಗಿಲಿನಲ್ಲಿ ಅತ್ಯಂತ ಅಪಾಯಕಾರಿ ಸಮುದ್ರದ ಅಲೆಗಳ ನಡುವೆ ಮುಳುಗುತ್ತಿದ್ದವನನ್ನು ರಕ್ಷಿಸಲು ಹರಸಾಹಸ ಪಡೆಯಬೇಕಾಯಿತು ಎಂದು ರಕ್ಷಣೆ ಮಾಡಿದ ಪ್ರೇಮ್ ಪ್ರಕಾಶ್ ಡಿಸೋಜ ಪತ್ರಿಕೆಗೆ ಮಾಹಿತಿ ನೀಡಿದರು.
ಸಮುದ್ರದ ಅಲೆಗಳೊಂದಿಗೆ ಈಜಾಡಿ ಬಳಲಿದ್ದ ನವಾಝ್‍ಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗ್ರೆಗೆ ಕಳುಹಿಸಿ ಕೊಡಲಾಯಿತು.