ಬೆಂಗಳೂರು: ಪ್ರಕೃತಿ ಮತ್ತು ವನ್ಯಜೀವಿಗಳ ರಕ್ಷಣೆಯಿಂದ ಮನುಕುಲದ ಉಳಿವು ಸಾಧ್ಯ. ಕರ್ನಾಟಕಕ್ಕೆ ದೇವರು ನೀಡಿರುವ ಅಮೂಲ್ಯ ಪ್ರಕೃತಿ ಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದರು.
ಅರಣ್ಯ ಇಲಾಖೆಯಿಂದ ಮಂಗಳವಾರ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ 64ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ತುಂಗಭದ್ರಾ, ಕಾವೇರಿ ಹೀಗೆ ಹತ್ತಾರು ನದಿಗಳ ಜತೆಗೆ ವಿಶ್ವವಿಖ್ಯಾತ ಜೋಗಜಲಪಾತವೂ ಇದೆ. ಅಪಾರ ವನ್ಯಸಂಪತ್ತು, ಪ್ರಾಣಿ, ಪಕ್ಷಿಗಳಿವೆ. ಇದನ್ನೆಲ್ಲವನ್ನು ಆದ್ಯತೆಯ ಮೇರೆಗೆ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಾಗಬೇಕು ಎಂದು ಹೇಳಿದರು.
ಪ್ರಕೃತಿಯನ್ನು ಜೀವಂತವಾಗಿಟ್ಟುಕೊಂಡರೆ ನಾವೆಲ್ಲರೂ ಜೀವಂತವಾಗಿರುತ್ತೇವೆ. ಪ್ರಕೃತಿಗೆ ಮೃತ್ಯು ನೀಡಿದರೆ, ನಾವ್ಯಾರೂ ಉಳಿಯುವುದಿಲ್ಲ. ಕಾಡು ನಾಶದಿಂದ ಪರಿಸರ ಅಸಮತೋಲದನದ ಜತೆಗೆ ಮನುಷ್ಯನ ಜೀವನ ಕ್ರಮದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕಾಲಚಕ್ರದಲ್ಲೂ ಬದಲಾವಣೆಯಾಗುತ್ತದೆ. ಮಳೆಗಾಲದಲ್ಲಿ ಸರಿಯಾಗಿ ಮಳೆ ಬರುವುದಿಲ್ಲ. ಬೇಸಿಗೆಯಲ್ಲಿ ಅತಿಯಾದ ಬಿಸಿಲಿರುತ್ತದೆ. ಹೀಗಾಗಿ ಪರಿಸರ ಮತ್ತು ವನ್ಯಜೀವಿ ರಕ್ಷಣೆಯ ಅರಿವು ಅಗತ್ಯವಾಗಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಕಾಡುಗಳ ರಕ್ಷಣೆ ಮತ್ತು ಸಂವರ್ಧನೆ ತುರ್ತು ಅಗತ್ಯವಾಗಿದೆ. ಹತ್ತಾರು ಪಕ್ಷಿ ಸಂಕುಲಗಳು ನಾಶವಾಗಿವೆ ಹಾಗೂ ಕೆಲವು ಅಳಿವಿನಂಚಿನದಲ್ಲಿದೆ. ಹುಲಿ, ಸಿಂಹ, ನವಿಲು ಸಹಿತವಾಗಿ ಎಲ್ಲ ಪ್ರಾಣಿ ಪಕ್ಷಿಗಳ ರಕ್ಷಣೆಯಾಗಬೇಕು. ಪ್ರಾಣಿ ಪಕ್ಷಿಗಳ ರಕ್ಷಣೆಯ ಜತೆಗೆ ಅವುಗಳಿಗೆ ಬೇಕಾದ ಆಹಾರ ವ್ಯವಸ್ಥೆ ಮಾಡಬೇಕು. ಮಕ್ಕಳಿಗೆ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು. ಕಾಂಕ್ರೀಟೀಕರಣಕ್ಕೆ ಬದಲಾಗಿ ಕಾಡುಗಳನ್ನು ಬೆಳೆಸುವ ಪ್ರವೃತ್ತಿ ಹೆಚ್ಚಾಗಬೇಕು. ಇದಕ್ಕೆ ಸರ್ಕಾರವು ಹೆಚ್ಚು ಮಹತ್ವ ನೀಡಬೇಕು ಎಂದರು.
ತಾಲೂಕಿಗೊಂದು ನರ್ಸರಿ!: ಸಚಿವ ಆರ್.ಶಂಕರ್ ಮಾತನಾಡಿ, ಕರ್ನಾಟಕವನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಈಗಾಗಲೇ 5.50 ಕೋಟಿ ಗಿಡ ನೆಡುವ ಯೋಜನೆ ಚಾಲ್ತಿಯಲ್ಲಿದೆ. ಮುಂದಿನ ವರ್ಷ 10 ಕೋಟಿ ಗಿಡ ನೆಡಲು ಬೇಕಾದ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ಹಾಗೆಯೇ ತಾಲೂಕು ಮಟ್ಟದಲ್ಲಿ ಸಾರ್ವಜನಿಕರ ಅಗತ್ಯಗೆ ಅನುಗುಣವಾಗಿ ಗಿಡಗಳನ್ನು ನೀಡಲು ತಾಲೂಕಿಗೊಂದು ನರ್ಸರಿ ಆರಂಭಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಸಮಗ್ರ ರಕ್ಷಣೆ ಮತ್ತು ಸಂರಕ್ಷಣಾ ಕ್ರಮಗಳಿಂದ ರಾಜ್ಯದಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶದಲ್ಲಿ 406 ಹುಲಿಗಳು, 6072 ಆನೆಗಳು, ಉಳಿದುಕೊಂಡಿವೆ. ದೇಶದಲ್ಲಿ ಉಳಿದುಕೊಂಡಿರುವ ಆನೆಗಳ ಪೈಕಿ ಶೇ.25ರಷ್ಟು ಕರ್ನಾಟಕದಲ್ಲಿದೆ. ಜತೆಗೆ ದೇಶದಲ್ಲಿಯೇ ಅತಿ ಹೆಚ್ಚು ಹುಲಿ ಹಾಗೂ ಆನೆಗಳನ್ನು ಹೊಂದಿರುವ ರಾಜ್ಯ ನಮ್ಮದಾಗಿದೆ ಎಂದು ಮಾಹಿತಿ ನೀಡಿದರು. ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ.ಸಂದೀಪ್ ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಿ.ಜಯರಾಮ್ ಇದ್ದರು.
ವನ್ಯಜೀವಿಗಳು ಮತ್ತು ಮನುಷ್ಯ ಸಮನ್ವಯದಿಂದ ಬದುಕಬೇಕು. ವನ್ಯಜೀವಿಗಳಿಗೆ ಯಾವುದೇ ರೀತಿಯಲ್ಲೂ ಆಘಾತವಾಗದಂತೆ ಎಚ್ಚರ ವಹಿಸಬೇಕು. ವಾಯಮಾಲಿನ್ಯ ತಡೆಗೂ ಗಮನ ಹರಿಸಬೇಕು. ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ರಾಜ್ಯವನ್ನು ಹಸಿರೀಕರಣ ಮಾಡುವ ಮೂಲಕ ವನ್ಯಜೀವಿಗಳ ರಕ್ಷಣೆ ಅರಿವು ಮೂಡಿಸಬೇಕು.
-ಆರ್.ಶಂಕರ್, ಸಚಿವ