ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮೃತ್ಯುಕೂಪಗಳಾಗಿ ಪರಿಣಮಿಸಿರುವ ಕೃಷಿ ಹೊಂಡಗಳು ಈಗ ಪ್ರಾಣಿ ಪಕ್ಷಿಗಳಿಗೂ ತೀವ್ರ ಸಂಕಷ್ಟ ತಂದುಕೊಟ್ಟಿವೆ. ನೀರಿನ ದಾಹ ನೀಗಿಸಿಕೊಳ್ಳಲು ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದು ಸೋಮವಾರ ಕೃಷಿ ಹೊಂಡದಲ್ಲಿ ಬಿದ್ದು ಹೊರ ಬರಲಾಗದೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವೇಳೆ ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸಿ ಮರುಜೀವ ನೀಡಿರುವ ಘಟನೆ ನಡೆದಿದೆ.
ತಾಲೂಕಿನ ಶ್ರೀರಾಮಪುರದ ಅರಣ್ಯ ಪ್ರದೇಶದಿಂದ ದಾಹ ತೀರಿಸಿಕೊಳ್ಳಲು ಗ್ರಾಮಕ್ಕೆ ಬಂದಿದ್ದ ಜಿಂಕೆಯನ್ನು ನೋಡಿದ ನಾಯಿಗಳು ಹಿಂಬಾಲಿಸಿದ್ದು, ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಗ್ರಾಮದ ಸಮೀಪವೇ ಇದ್ದ ರೈತರೊಬ್ಬರ ಕೃಷಿ ಹೊಂಡಕ್ಕೆ ಬಿದ್ದಿದೆ. ಹೊಂಡದಿಂದ ಹೊರ ಬರಲು ಸಾಧ್ಯವಾಗದೇ ನೀರಿನಲ್ಲಿ ಒದ್ದಾಡಿದೆ.
ಗ್ರಾಮಸ್ಥರಿಂದ ರಕ್ಷಣೆ: ದಾರಿಯಲ್ಲಿ ಬಂದ ಶ್ರೀರಾಮಪುರ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಹನುಮಂತಪ್ಪ, ಛಾಯಾಚಿತ್ರ ಗ್ರಾಹಕ ಬಿ.ಆರ್.ಮಂಜುನಾಥ, ಸರಸ್ವತಮ್ಮ ನಾರಾಯಣಮ್ಮ ಮತ್ತಿತರರು ನಾಯಿಗಳು ಹಿಂಡು ಕೃಷಿ ಹೊಂಡದ ಬಳಿ ಇರುವುದನ್ನು ನೋಡಿ ಸ್ಥಳಕ್ಕೆ ಹೋಗಿ ನೋಡಿದಾಗ ಜಿಂಕೆ ಕೃಷಿ ಹೊಂಡದಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಬಿ.ಆರ್.ಮಂಜುನಾಥ, ಹನುಮಂತಪ್ಪ ಹೊಂಡಕ್ಕೆ ಇಳಿದು ಜಿಂಕೆಯನ್ನು ರಕ್ಷಿಸಿ ಗ್ರಾಮಕ್ಕೆ ತೆಗೆದುಕೊಂಡು ಬಂದು ಆರೈಕೆ ಮಾಡಿದ್ದಾರೆ.
ಅರಣ್ಯ ಇಲಾಖೆ ವಶಕ್ಕೆ ಜಿಂಕೆ: ಜಿಂಕೆಯನ್ನು ಕೃಷಿ ಹೊಂಡದಿಂದ ರಕ್ಷಿಸಿದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಆಗಮಿಸಿದ ಗ್ರಾಮದ ಅರಣ್ಯ ರಕ್ಷಕ ಅವಿನಾಶ್ ಮತ್ತಿತರರು ತಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಿಳಿಸಿದ ಬಳಿಕ ಅರಣ್ಯ ಇಲಾಖೆ ಕಾರಿನಲ್ಲಿ ಜಿಂಕೆಯನ್ನು ಕೊಂಡೊಯ್ಯಲಾಯಿತು.
ನೀರಿಗಾಗಿ ವನ್ಯಜೀವಿಗಳ ಪರದಾಟ: ಜಿಲ್ಲೆಯಲ್ಲಿ ಇತ್ತೀಚೆಗೆ ಮಳೆ, ಬೆಳೆ ತೀವ್ರ ಕೊರತೆಯಿಂದ ಕಾಡಿನಲ್ಲಿರುವ ವನ್ಯ ಜೀವಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ನೀರಿಗಾಗಿ ಕಾಡಿನಿಂದ ನಾಡಿಗೆ ಬಂದರೆ ವಾಪಸ್ಸು ಹೋಗುವ ಖಾತರಿ ಇಲ್ಲ.
ನೀರು ಕುಡಿಯದೇ ಬದುಕುಳಿಯುವುದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯಲ್ಲಿ ವನ್ಯಜೀವಿಗಳು ಕುಡಿಯುವ ನೀರಿಲ್ಲದೇ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈ ರೀತಿಯ ಪ್ರಕರಣಗಳು ಸಾಕಷ್ಟು ನಡೆದಿವೆ. ಅನೇಕ ಜಿಂಕೆ ಮರಿಗಳು ಕಾಡಿನಿಂದ ನಾಡಿಗೆ ಬಂದು ನಾಯಿಗಳ ದಾಳಿಗೆ ತುತ್ತಾಗಿ ಬಲಿಯಾಗಿರುವ ಉದಾಹರಣೆಗಳು ಇವೆ.