Advertisement

ಹೆಬ್ರಿ: ಆಶ್ರಮ ಶಾಲೆಯ ಮೂವರ ಪರಾರಿ ಯತ್ನ

12:04 AM Oct 31, 2019 | mahesh |

ಹೆಬ್ರಿ: ಹೆಬ್ರಿ ಆಶ್ರಮ ಶಾಲೆಯ ಮೂವರು ವಿದ್ಯಾರ್ಥಿಗಳು ಯಾರಿಗೂ ತಿಳಿಸದೆ ಶಾಲೆಯಿಂದ ಊರಿಗೆ ಪರಾರಿಯಾಗಲು ಯತ್ನಿಸಿದರೂ ಶಿವಪುರ ಪಂಚಾಯತ್‌ನ ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಮತ್ತು ಹೆಬ್ರಿ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಮರಳಿ ಹಾಸ್ಟೆಲ್‌ ಸೇರಿದ ಘಟನೆ ಅ. 30ರಂದು ನಡೆದಿದೆ.

Advertisement

5ನೇ ತರಗತಿಯ ಓರ್ವ ಮತ್ತು ಆರನೇ ತರಗತಿಯ ಇಬ್ಬರು ಪರಾರಿಯಾಗಲು ಯತ್ನಿಸಿದವರು. ಹಾಸ್ಟೆಲ್‌ನಲ್ಲಿ ಕಿರುಕುಳದಿಂದ ಪರಾರಿ ಯಾಗಲು ಮುಂದಾದೆವು ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಘಟನೆ ವಿವರ
ರಾಯಚೂರು ಮೂಲದ ಮೂವರು ವಿದ್ಯಾರ್ಥಿಗಳು ಬುಧವಾರ ಬೆಳಗ್ಗೆ ಹಾಸ್ಟೆಲ್‌ನಿಂದ ಶಾಲೆಗೆ ಬಂದಿದ್ದರು. ಅಸೆಂಬ್ಲಿ ಮುಗಿದ ಬಳಿಕ ಅವರು ಕಾಣಿಸದೇ ಇದ್ದಾಗ ಶಿಕ್ಷಕರು ಹಾಸ್ಟೆಲ್‌ನಲ್ಲಿ, ಬಸ್‌ ತಂಗುದಾಣದಲ್ಲಿ ಹುಡುಕಾಡಿದರು. ಆಗ ಅವರು ಬಸ್ಸಿನಲ್ಲಿ ಹೋಗಿದ್ದಾರೆಂದು ಸಾರ್ವಜನಿಕರು ಮಾಹಿತಿ ನೀಡಿದ್ದು, ಶಿಕ್ಷಕರು ಹೆಬ್ರಿ ಠಾಣೆಗೆ ದೂರು ನೀಡಿದರು. ತತ್‌ಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪಂಚಾಯತ್‌ ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಅವರ ನೆರವಿನಿಂದ ಪಾಡಿಗಾರು ಬಳಿ ಖಾಸಗಿ ಬಸ್ಸೊಂದನ್ನು ನಿಲ್ಲಿಸಿ ವಿಚಾರಿಸಿದರು. ಮಕ್ಕಳು ಅದೇ ಬಸ್ಸಿನಲ್ಲಿ ಉಡುಪಿಗೆ ಟಿಕೆಟ್‌ ಮಾಡಿ ಪ್ರಯಾಣಿಸುತ್ತಿದ್ದು, ಅವರನ್ನು ಪೊಲೀಸರಿಗೆ ಒಪ್ಪಿಸಲಾಯಿತು.

100 ರೂ. ಇತ್ತು
ವಿದ್ಯಾರ್ಥಿಗಳನ್ನು ಸ್ಥಳೀಯರು ವಿಚಾರಿಸಿದಾಗ ಹಾಸ್ಟೆಲ್‌ನಲ್ಲಿ ವಾರ್ಡನ್‌ ಬೈಯುತ್ತಾರೆ. ಶೌಚಾಲಯ ಸ್ವತ್ಛ ಮಾಡಲು ಹೇಳುತ್ತಾರೆ; ಅಲ್ಲದೆ ದೀಪಾವಳಿಗೂ ಊರಿಗೆ ಹೋಗಿರಲಿಲ್ಲ. ಆದ್ದರಿಂದ ಊರಿಗೆ ಹೋಗಲು ನಿರ್ಧರಿಸಿದ್ದೇವೆ ಎಂದು ಹೇಳಿಕೊಂಡಿದ್ದರು. ಅವರಲ್ಲಿ ಇದ್ದದ್ದು 100 ರೂ. ಮಾತ್ರ. ಸಾಕಷ್ಟು ದುಡ್ಡಿಲ್ಲದೇ ಊರಿಗೆ ಹೊರಟದ್ದು ಅಚ್ಚರಿ ಮೂಡಿಸಿದೆ. ವಿದ್ಯಾರ್ಥಿಗಳು ಸಕಾಲದಲ್ಲಿ ಸಿಕ್ಕಿರುವುದರಿಂದ ದೊಡ್ಡ ಅಪಾಯ ತಪ್ಪಿದೆ ಎಂದು ಸುರೇಶ್‌ ಶೆಟ್ಟಿ ತಿಳಿಸಿದ್ದಾರೆ.

ಎಚ್ಚರ ವಹಿಸಬೇಕು
ಆಶ್ರಮ ಶಾಲೆಯ ವಾರ್ಡನ್‌ ಸಹಿತ ಸಿಬಂದಿ ವಿದ್ಯಾರ್ಥಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ತೊಂದರೆಗಳಿದ್ದರೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಆಗ ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಕಾರ್ಕಳ ತಾಲೂಕು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next